ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಂಜನಗೂಡಲ್ಲಿ ಅಕ್ಷರ ಜಾತ್ರೆ

Rashmi Kasaragodu
Updated On : 14 Jun 2013, 12:58 pm

ಮೈಸೂರು: ಶ್ರೀಕಂಠೇಶ್ವರ ದೊಡ್ಡ ಜಾತ್ರೆ, ಚಿಕ್ಕ ಜಾತ್ರೆಗಳಿಂದ ಖ್ಯಾತಿ ಪಡೆದಿರುವ ನಂಜನಗೂಡು ಶ್ರೀಕ್ಷೇತ್ರದಲ್ಲಿ ಈಗ ಮತ್ತೊಂದು ಜಾತ್ರೆ ಸೇರಿಕೊಳ್ಳುತ್ತಿದೆ. ಅದುವೇ ಅಕ್ಷರ, ಸಾಹಿತ್ಯ ಜಾತ್ರೆ. ಅರ್ಥಾತ್ ಕನ್ನಡ ಸಾಹಿತ್ಯ ಸಮ್ಮೇಳನ.
ಹೌದು, ಮೈಸೂರು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನವು ದಕ್ಷಿಣಕಾಶಿ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ಕಲಾಮಂದಿರದಲ್ಲಿ ಜೂ.15 ಮತ್ತು 16 ರಂದು ನಡೆಯಲಿದೆ. ಇದಕ್ಕಾಗಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಕಲ ಸಿದ್ಧತೆ ಮಾಡಿಕೊಂಡಿದೆ.
ಈ ಸಮ್ಮೇಳನದಲ್ಲಿ ಜೂ.15ರ ಬೆಳಗ್ಗೆ 8ಕ್ಕೆ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು. ಬೆಳಗ್ಗೆ 8.30ಕ್ಕೆ ಸಮ್ಮೇಳನಾಧ್ಯಕ್ಷ ಪ್ರೊ.ಮಲೆಯೂರು ಗುರುಸ್ವಾಮಿ ಅವರನ್ನು ತೆರೆದ ವಾಹನದಲ್ಲಿ ಹುಲ್ಲಹಳ್ಳಿ ವೃತ್ತದಿಂದ ಸಮ್ಮೇಳನದ ವೇದಿಕೆವರೆಗೆ 30 ಜನಪದ ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಗುವುದು. ಈ ಮೆರವಣಿಗೆಗೆ ಜಿಪಂ ಅಧ್ಯಕ್ಷ ಕಾ.ಪು. ಸಿದ್ದವೀರಪ್ಪ ಚಾಲನೆ ನೀಡುವರು ಎಂದು ಕಸಾಪ ಜಿಲ್ಲಾಧ್ಯಕ್ಷ ಎಂ.ಚಂದ್ರಶೇಖರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮೇಳನ ಉದ್ಘಾಟಿಸುವರು. ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ.ಆರ್.ಕೆ. ನಲ್ಲೂರು ಪ್ರಸಾದ್ ಅಧ್ಯಕ್ಷತೆ ವಹಿಸುವರು. ಸಮ್ಮೇಳನಾಧ್ಯಕ್ಷ ಪ್ರೊ. ಮಲೆಯೂರು ಗುರುಸ್ವಾಮಿ ಮಾತನಾಡುವರು. ಬಳಿಕ ತೀರ್ಥ ಸ್ಮರಣ ಸಂಚಿಕೆಯನ್ನು ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಕಪಿಲಾ ನದಿಯ ಎಡಬಲದಿ ಕೃತಿಯನ್ನು ಸಾಹಿತಿ ಡಾ.ಸಿಪಿಕೆ, ಸಂಸದ ಆರ್. ಧ್ರುವನಾರಾಯಣ ಬಿಡುಗಡೆಗೊಳಿಸುವರು. ಕಲಾ ಪ್ರದರ್ಶನವನ್ನು ಸಂಸದ ಎಚ್. ವಿಶ್ವನಾಥ್ ಉದ್ಘಾಟಿಸುವರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement