ಲಂಚ: 'ಲೋಕಾ' ಬಲೆಗೆ ಗುಮಾಸ್ತೆ
ಮೈಸೂರು: ಜಮೀನು ಸಂಬಂಧಿಸಿದ ಕಡತಗಳನ್ನು ನ್ಯಾಯಾಲಯಕ್ಕೆ ಕಳುಹಿಸಿಕೊಡಲು ಲಂಚ ಸ್ವೀಕರಿಸುತ್ತಿದ್ದ ದ್ವಿತೀಯ ದರ್ಜೆ ಗುಮಾಸ್ತೆ ಲೋಕಾಯುಕ್ತ ಪೊಲೀಸರಿಗೆ ಗುರುವಾರ ಮಧ್ಯಾಹ್ನ ಸಿಕ್ಕಿಬಿದ್ದಿದ್ದಾರೆ. ಮೈಸೂರು ಕಬಿನಿ ಜಲಾಶಯ ಯೋಜನೆ ವಿಶೇಷ ಭೂ ಸ್ವಾಧೀನ ಅಧಿಕಾರಿಗಳ ಕಚೇರಿಯ ದ್ವಿತೀಯ ದರ್ಜೆ ಸಹಾಯಕಿ ಶುಭಾ ಸಿಕ್ಕಿಬಿದ್ದವರು. ಇವರು ಜಗನ್ಮೋಹನ ಅರಮನೆ ಬಳಿಯಿರುವ ಕಚೇರಿಯಲ್ಲಿ 2800 ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಲೋಕಾಯುಕ್ತ ಎಸ್ಪಿ ಎಸ್.ಎಂ. ಜಗದೀಶ್ ಪ್ರಸಾದ್ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಎಂ. ಧರ್ಮೇಂದ್ರ ಮತ್ತು ಸಿಬ್ಬಂದಿ ಎ.ವಿ. ಕೃಷ್ಣಮೂರ್ತಿ, ಭಾರತಿ, ದಾಕ್ಷಾಯಿಣಿ, ಪುಟ್ಟಣ್ಣ, ಮಹಾದೇವು, ಶಿವಶಂಕರ, ರಮೇಶ್ ಈ ದಾಳಿ ನಡೆಸಿದ್ದಾರೆ.