ಶಂಕಿತ ಡೆಂಘೀಗೆ ಗೃಹಿಣಿ ಬಲಿ
ಮೈಸೂರು: ಶಂಕಿತ ಡೆಂಘೀ ಜ್ವರಕ್ಕೆ ಗೃಹಿಣಿಯೊಬ್ಬರು ಬಲಿಯಾಗಿರುವ ಘಟನೆ ಮೈಸೂರಿನಲ್ಲಿ ಗುರುವಾರ ನಡೆದಿದೆ. ಮೈಸೂರು ತಾಲೂಕು ಜಯಪುರ ಹೋಬಳಿ ದಡದಹಳ್ಳಿ ನಿವಾಸಿ ಮಂಜು ಎಂಬವರ ಪತ್ನಿ ಸುಮಿತ್ರಾ (22) ಮೃತಪಟ್ಟವರು. ಇವರಿಗೆ ಮದುವೆಯಾಗಿ 4 ವರ್ಷಗಳಾಗಿದ್ದು, ಎರಡು ವರ್ಷದ ಮಗು ಹಾಗೂ 8 ತಿಂಗಳ ಮಗು ಇದೆ.
ಸುಮಿತ್ರಾ ಅವರಿಗೆ ಕಳೆದೊಂದು ವಾರದಿಂದ ಜ್ವರ ಕಾಣಿಸಿಕೊಂಡಿದ್ದು, ಸ್ಥಳೀಯ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದರು. ಆದರೆ, ಜ್ವರ ಕಡಿಮೆ ಆಗಿರಲಿಲ್ಲ. ಒಮ್ಮೆಲೆ ಜ್ವರ ಹೆಚ್ಚಾಗಿದ್ದರಿಂದ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಹೋಗಲು ಸೂಚಿಸಿದ್ದರು. ಹೀಗೆ ವೈದ್ಯರ ಸೂಚನೆ ಮೇರೆಗೆ 4- 5 ಖಾಸಗಿ ಆಸ್ಪತ್ರೆಗಳನ್ನು ಬದಲಿಸಿದ್ದರು. ಸುಮಿತ್ರಾಗೆ ಶಂಕಿತ ಡೆಂಘೀ ಜ್ವರ ಇದ್ದುದ್ದರಿಂದ ಖಾಸಗಿ ಆಸ್ಪತ್ರೆಯ ವೈದ್ಯರು ಸರಿಯಾದ ಚಿಕಿತ್ಸೆ ನೀಡಿಲ್ಲ. ಇದರಿಂದಲೇ ಸುಮಿತ್ರಾ ಮೃತಪಟ್ಟಿರುವುದಾಗಿ ಕುಟುಂಬದವರು ಆರೋಪಿಸಿದ್ದಾರೆ.