ಗುಂಡು ತೋಪು ಒತ್ತುವರಿ ತೆರವಿಗೆ ಆಗ್ರಹ
ಕ.ಪ್ರ.ವಾರ್ತೆ ಬೈಲುಕುಪ್ಪೆ ಜೂ. 14
ಗುಂಡು ತೋಪು ಒತ್ತುವರಿಯಾಗಿದೆ ಎಂದು ಹಲವಾರು ಬಾರಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಒಂದು ವಾರದೊಳಗೆ ತೆರವುಗೊಳಿಸದೆ ಹೋದರೆ ತಾಲೂಕು ಕಚೇರಿ ಎದುರು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ದಸಂಸ ಸಂಚಾಲಕ ಕುಮಾರ್ ಹೇಳಿದರು.
ತಾಲೂಕಿನ ಕರಡಿಪುರ ಗ್ರಾಮದ ಬಿದಿರುಕಟ್ಟೆ ಏರಿ ಮೇಲೆ ಸರ್ವೆ ನಂ.45ರಲ್ಲಿ 36 ಗುಂಟೆ ಗುಂಡುತೋಪು ಜಾಗವು ಅನಾಧಿಕಾಲದಿಂದಲೂ ಹಾಗೆ ಇದ್ದು, ಈ ಜಾಗದಲ್ಲಿ ಜಾನುವಾರುಗಳು ಮೇಯಲು ಉಪಯೋಗವಾಗಲೆಂದು ಕಾದಿರಿಸಲಾಗಿತ್ತು. ಆದರೆ ಗ್ರಾಮದ ದೊಡ್ಡಯ್ಯ, ರಾಜಣ್ಣ, ನಾಗರಾಜ್ ಎಂಬವರು ಅಕ್ರಮವಾಗಿ ಹಂಚಿಕೊಂಡು ಉಳುಮೆ ಮಾಡಿ ತಂಬಾಕನ್ನು ನಾಟಿ ಮಾಡಿದ್ದಾರೆ ಎಂದು ತಾಲೂಕಿನ ಬೆಟ್ಟದಪುರ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಬಗ್ಗೆ ಈ ಹಿಂದೆ ಇದ್ದ ತಹಸೀಲ್ದಾರ್ ಡಾ.ನಂಜುಂಡೇಗೌಡ ಅವರಿಗೆ ದೂರು ಸಲ್ಲಿಸಿದಾಗ ಈ ಜಾಗವನ್ನು ತೆರವುಗೊಳಿಸಿ ಖಾಲಿ ಬಿಡಿಸಿದ್ದರು. ಅವರು ಹೋದ ನಂತರ ಮತ್ತೆ ಈ ವರ್ಷದಿಂದ ಇವರೇ ಉಳುಮೆ ಮಾಡುತ್ತಿದ್ದಾರೆ. ಈ ಬಗ್ಗೆ ಈಗಿರುವ ತಹಸೀಲ್ದಾರ್ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಒಂದು ವಾರದೊಳಗೆ ಗುಂಡುತೋಪು ಜಾಗವನ್ನು ತೆರವುಗೊಳಿಸದೆ ಹೋದರೆ ತಾಲೂಕು ಕಚೇರಿ ಮುಂಭಾಗ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಾಜಿ ಗ್ರಾಪಂ ಉಪಾಧ್ಯಕ್ಷ ಶಿವಣ್ಣ, ಮುಖಂಡರಾದ ರೇವಣ್ಣ, ತಮ್ಮಯ್ಯ, ಬೇಲೂರಯ್ಯ, ಶಿವಣ್ಣ ಇದ್ದರು.