ಸೆಸ್ಕ್ ಅಧಿಕಾರಿಗಳ ನಿರ್ಲಕ್ಷ್ಯ: ಆರೋಪ
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಜೂ. 14
ಇಲ್ಲಿನ ಮಹದೇಶ್ವರ ಬಡಾವಣೆಗೆ ಗ್ರಾಮೀಣ ಪ್ರದೇಶದ ವ್ಯಾಪ್ತಿಯ ವಿದ್ಯುತ್ ಸಂಪರ್ಕವಿದ್ದು, ಅದನ್ನು ನಗರ ವ್ಯಾಪ್ತಿಯ ಸೌಲಭ್ಯಕ್ಕೆ ಸೇರಿಸುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಸೆಸ್ಕ್ ಅಧಿಕಾರಿಗಳು ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ ಎಂದು ದಸಂಸ ನಗರ ಸಂಚಾಲಕ ಎಚ್.ಕೆ. ಮಹೇಶ್ ಆರೋಪಿಸಿದ್ದಾರೆ.
ಬಡಾವಣೆಗೆ ಪ್ರಸ್ತುತ ಗ್ರಾಮಾಂತರ ವ್ಯಾಪ್ತಿಯ ವಿದ್ಯುತ್ ಸಂಪರ್ಕ ನೀಡಿದೆ. ಅದನ್ನು ಪಟ್ಟಣ ಪ್ರದೇಶದ ವ್ಯಾಪ್ತಿಗೆ ಸೇರಿಸುವಂತೆ ಸೆಸ್ಕ್ ಇಲಾಖೆಯ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಲಾಗಿದೆ. ಅದಕ್ಕೆ ತಗಲುವ ವೆಚ್ಚವನ್ನು ಪಪಂ ವತಿಯಿಂದ ಕಟ್ಟುವಂತೆ ಸೆಸ್ಕ್ ಅಧಿಕಾರಿಗಳ ನಿರ್ದೇಶನದಂತೆ ಫೆ. 14 ರಂದು ಪಪಂ ವತಿಯಿಂದ 3.18 ಲಕ್ಷವನ್ನು ಸೆಸ್ಕ್ಗೆ ಕಟ್ಟಲಾಗಿದೆ. ಆದರೂ ಸೆಸ್ಕ್ ಅಧಿಕಾರಿಗಳು ಗ್ರಾಮಾಂತರದಿಂದ ಪಟ್ಟಣ ಪ್ರದೇಶದ ವ್ಯಾಪ್ತಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ವಿಳಂಬ ತೋರುವ ಮೂಲಕ ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಅಧಿಕಾರಿಗಳು ವಾರದೊಳಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಸೆಸ್ಕ್ ಕಚೇರಿಯ ಮುಂಭಾಗ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.