ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕುಂಚದಲ್ಲಿ ಕಾವ್ಯ, ಸಂಗೀತದಲ್ಲಿ ನಾದ

Rashmi Kasaragodu
Updated On : 16 Jun 2013, 12:35 pm

ಘನಲಿಂಗಿ ಶಿವಯೋಗಿ ವೇದಿಕೆ, ನಂಜನಗೂಡು: ಕಪಿಲೆ ತೀರದಲ್ಲಿ ನಡೆಯುತ್ತಿರುವ ಅಕ್ಷರ ಜಾತ್ರೆಯಲ್ಲಿ ಮೊದಲ ದಿನ ನಡೆದ ಪ್ರತ್ಯೇಕ ಗೋಷ್ಠಿಗಳು ಸಾಹಿತ್ಯ, ಸಂಗೀತದ ಅನಾವರಣಕ್ಕೆ ಸಾಕ್ಷಿಯಾದವು.
ಬೆಳಗಿನ ಉದ್ಘಾಟನೆ ಕಾರ್ಯಕ್ರಮ ತಡವಾಗಿ ಆರಂಭವಾಗಿದ್ದು ಮಧ್ಯಾಹ್ನದ ಗೋಷ್ಠಿಗಳ ಮೇಲೆ ಪರಿಣಾಮ ಬೀರಿತು. ಆದರೂ, ಗೋಷ್ಠಿಯಲ್ಲಿ ಕೈಗೆತ್ತಿಕೊಂಡಿದ್ದ ವಿಷಯಗಳು ಧಾರ್ಮಿಕ ಹಿನ್ನೆಲೆಯಲ್ಲಿ ಪ್ರಸಿದ್ಧಿ ಪಡೆದಿರುವ ನಂಜನಗೂಡು ಶ್ರೀಕ್ಷೇತ್ರದ ಚರಿತ್ರೆ, ತಾಲೂಕಿನ ಇತಿಹಾಸ, ಸಾಧನೆ ಮುಂತಾದ ವಿಚಾರಗಳನ್ನು ಹೊರ ಚೆಲ್ಲಿದವು.
ಕವಯತ್ರಿ ಡಾ.ಲತಾ ರಾಜಶೇಖರ್ ಅವರಿಂದ ಉದ್ಘಾಟನೆಗೊಂಡ ಕಾವ್ಯ- ಕುಂಚ- ಗಾಯನ ಕಾರ್ಯಕ್ರಮವು ಗೋಧೂಳಿಯ ಸಮಯದಲ್ಲಿ ಸಾಹಿತ್ಯ, ಸಂಗೀತಾಸಕ್ತರನ್ನು ಏಕಾತನತೆಯಲ್ಲಿ ಹಿಡಿದಿಟ್ಟಿತ್ತು. ವೇದಿಕೆಯ ಮೇಲೆ ಆಸೀನರಾಗಿದ್ದ ಹದಿಮೂರು ಮಂದಿ ಕವಿಗಳು ತಾವು ರಚಿಸಿದ್ದ ಕಾವ್ಯಗಳನ್ನು ವಾಚಿಸಿದರು. ಪ್ರೊ.ಮಲ್ಲಣ್ಣ ಸಾರಥ್ಯದ ಗಾಯಕರ ತಂಡ ಆ ಕಾವ್ಯಗಳನ್ನು ಸಂಗೀತದ ಲಯದೊಂದಿಗೆ ಸುಶ್ರಾವ್ಯವಾಗಿ ಹಾಡಿದರು. ಕವಿ- ಗಾಯಕನ ಲಯಕ್ಕೆ ಕಲಾವಿದ ಬಾದಲ್ ನಂಜುಂಡಸ್ವಾಮಿ ಕಲೆಯ ಮೂಲಕ ಜೀವ ತುಂಬಿದರು.
ಮೊದಲಿಗೆ ಕವಿ ಎಂ.ಬಿ. ಜಯಶಂಕರ ತಮ್ಮ ಭೂಸ ಸಾಹಿತ್ಯ ಕವನಸಂಕಲನದಿಂದ ಆಯ್ಕೆ ಮಾಡಿಕೊಂಡಿದ್ದ ಪ್ರಾರ್ಥನೆ ಶೀರ್ಷಿಕೆಯ-
ತಿಳಿವು ಕೊನರಲಿ
ಅಹಂ ಅಳಿಯಲಿ
ಬುದ್ಧ ಬೆಳಕದು ಬೆಳಗಲಿ
ನನ್ನ ಕವಿತೆಯ ಆತ್ಮವಾಗುತಾ
ಪ್ರೀತಿ ಸಮತೆಯ ಸಾರಲಿ
- ಎಂಬ ಕಾವ್ಯನ್ನು ಪ್ರೊ.ಎಸ್. ಮಲ್ಲಣ್ಣ, ಸುಗಂಧಮ್ಮ ಜಯಪ್ಪ, ಅಮೂಲ್ಯ ಹಾಡಿದರು. ಹಾಗೆ ಕವಯತ್ರಿ ಡಾ.ಎನ್.ಕೆ. ಲೋಲಾಕ್ಷಿ ಅವರು ತಮ್ಮ ದೇವರೂಪ ಶೀರ್ಷಿಕೆಯ-
ಕಡಲು ಮೊರೆಯಿತು, ಉಕ್ಕಿ ಹರಿಯಿತು
ಚಿಮ್ಮಿ ಮೇಲೆ ಹಾರಿ
ಚಿಮ್ಮಿದಷ್ಟು ಒಳ ಇಳಿಯುತ್ತಾ
ದುಡುಕಿ ಅಮೃತ ಭೂಮಿ
- ಎಂಬ ಕಾವ್ಯ ವಾಚಿಸಿದರು. ಕುಮಾರಿ ಅಮೂಲ್ಯ ಹಾಡಿದರು. ಬಾದಲ್ ಬಣ್ಣದಲ್ಲಿ ಗೀಚಿದರು. ಇವರೊಟ್ಟಿಗೆ ಕೆ.ಆರ್. ಪ್ರೇಮಲೀಲಾ, ಜಯಪ್ಪ ಹೊನ್ನಾಳಿ, ಉಷಾ ನರಸಿಂಹನ್, ಮಾನಸ, ಡಾ.ಎನ್.ಕೆ. ಲೋಲಾಕ್ಷಿ, ರಂಗನಾಥ್ ಮೈಸೂರು, ಟಿ.ಸತೀಶ್ ಜವರೇಗೌಡ, ಎಂ.ಬಿ. ಜಯಶಂಕರ್, ನಾಗರತ್ನ ಹೆಮ್ಮಿಗೆ, ಶಾಂತ ಜಗದೀಶ್, ಎಸ್. ಶ್ರೀಧರ್, ಉಮಾ ಶಿವಪ್ಪ, ಮಂಗಳಾ ಮುದ್ದು ಮಾದಪ್ಪ, ಎಚ್.ಎಲ್. ಶಿವಬಸಪ್ಪ ಕವನ ವಾಚಿಸಿದರು. ಕವಿತೆಗಳನ್ನು ಪ್ರೊ.ಎಸ್. ಮಲ್ಲಣ್ಣ, ಸುನಂಧಮ್ಮ ಜಯಪ್ಪ, ಅಮೂಲ್ಯ, ಶೈಲಾ ಸಿದ್ದರಾಮಪ್ಪ ಹಾಡಿದರು. ಬಾದಲ್ ನಂಜುಂಡಸ್ವಾಮಿ ತಂಡ ಚಿತ್ರ ರಚಿಸಿದರು.
ಅಂತರವೇ ಕಾರಣ: ಇದಕ್ಕೂ ಮೊದಲು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಜಿ.ಕೆ. ರವೀಂದ್ರ ಕುಮಾರ್ ಮಾತನಾಡಿ, ಕಾವ್ಯ- ಕಲೆ ದೂರವಾಗುತ್ತಿರುವುದಕ್ಕೆ ಸಾಹಿತಿ ಮತ್ತು ಸಂಗೀತ ಕಲಾವಿದರ ನಡುವಿನ ಅಂತರವೇ ಕಾರಣ. ಸಾಹಿತಿಯಾದವನು ಸಂಗೀತ ಆಲಿಸಬೇಕು. ಸಂಗೀತಗಾರನು ಸಾಹಿತ್ಯ ಓದಿಕೊಂಡಿರಬೇಕು. ಇಬ್ಬರೂ ಏಕಾಂತದಲ್ಲಿರುವಾಗ ಸೃಜನಶೀಲತೆ ಸೃಜಿಸಬೇಕು. ಒಂದು ಕಲೆಯು ಇನ್ನುಳಿದ ಕಲೆಗಳನ್ನು ಶ್ರೀಮಂತಗೊಳಿಸಬೇಕು ಎಂದು ಆಶಯ ಭಾಷಣ ಮಂಡಿಸಿದರು. ಮೈಸೂರು ವಿವಿ ಪ್ರಸಾರಾಂಗದ ನಿರ್ದೇಶಕ ಡಾ.ಸಿ. ನಾಗಣ್ಣ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪ್ರವೀಣ್ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement