ವಿಚಾರವಂತರಿಂದ ನಂಜನಗೂಡು ದರ್ಶನ
ನಂಜನಗೂಡು: ಸಾಹಿತ್ಯ ಸಮ್ಮೇಳನದ ಮೊದಲ ಗೋಷ್ಠಿಯನ್ನು ಧಾರ್ಮಿಕ ಹಿನ್ನೆಲೆಯುಳ್ಳ ನಂಜನಗೂಡು ತಾಲೂಕು ಬಗೆಗಿನ ವಿಚಾರ ವಿನಿಮಯಕ್ಕೆ ಮೀಸಲಿಡಲಾಗಿತ್ತು.
ಟಿ. ನರಸೀಪುರ ವಿದ್ಯೋದಯ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕಿ ಡಾ.ಸಿ.ಜಿ. ಉಷಾದೇವಿ ಅವರು ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ಮಾತನಾಡಿ, ನಮ್ಮ ತಾಲೂಕಿನ ದೇವನೂರ ಮಹಾದೇವ ಅವರು ದಲಿತ ಸಾಹಿತ್ಯ ಲೋಕವನ್ನು ಪರಿಚಯಿಸಿದರು. ಸಿ.ಕೆ.ಎನ್. ರಾಜಾ ಅವರು ಕಾನೂನು ಪದವಿ ಪಡೆದು ತಾಲೂಕಿನ ಹಿರಿಮೆಯನ್ನು ಹೆಚ್ಚಿಸಿದರು. ಇವರೊಂದಿಗೆ ಹೆಜ್ಜಿಗೆ ಲಿಂಗಣ್ಣ, ಹೊಸಕೋಟೆ ಅಂಕಪ್ಪ, ಅನಂತಶಾಸ್ತ್ರಿ, ಕರಿಬಸವಶಾಸ್ತ್ರಿ, ತಗಡೂರು ರಾಮಚಂದ್ರರಾವ್, ಶ್ರೀ ಶಿವ ಬಸವ ಸ್ವಾಮೀಜಿ, ಮುನ್ನಾರು ಕೃಷ್ಣಯ್ಯ, ವಿ.ಆರ್. ಸೇತೂರಾಂ, ಎನ್.ಎಸ್. ಶಾರದಾಪ್ರಸಾದ್, ಟಿ.ಎಸ್. ರಾಜಪ್ಪ, ಬಿ.ವಿ.ಕೆ. ಶಾಸ್ತ್ರಿ, ಶೇಷಗಿರಿರಾವ್, ದಕ್ಷಿಣಾಮೂರ್ತಿ ಮುಂತಾದವರ ಸಾಧನೆಗಳನ್ನು ಪರಿಚಯಿಸಿದರು.
ಗರ್ಗೇಶ್ವರಿ ಕಾಲೇಜಿನ ಪ್ರಾಧ್ಯಾಪಕ ರಮೇಶ್ ಅವರು ಧಾರ್ಮಿಕ ನೆಲೆ ಕುರಿತು ಮಾತನಾಡಿ, ತಾಲೂಕಿನಲ್ಲಿ ಸುತ್ತೂರು ಶ್ರೀಕ್ಷೇತ್ರ ತ್ರಿವಿಧ ದಾಸೋಹಕ್ಕೆ ಹೆಸರುವಾಸಿಯಾಗಿದೆ. ಹಾಗೆ ದೇವನೂರು ಮಠವು ಪ್ರತಿದಿನ ನಿರ್ಗತಿಕರಿಗೆ ದಾಸೋಹ ಮಾಡುತ್ತಿದೆ. ಶ್ರೀಕಂಠೇಶ್ವರ ದೇವಸ್ಥಾನವು ಭಕ್ತರನ್ನು ಆಕರ್ಷಿಸುತ್ತಿದೆ. ಹೀಗಾಗಿ ತಾಲೂಕು ಧಾರ್ಮಿಕ ಕ್ಷೇತ್ರವಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾನೂನು ತಜ್ಞ ಡಾ.ಸಿ.ಕೆ.ಎನ್. ರಾಜಾ ಅವರು ತಮ್ಮ ಬಾಲ್ಯದ ನೆನಪನ್ನು ಮೆಲುಕು ಹಾಕಿದರು. ಸಮಾಜ ಸೇವಕ ಕೆ.ರಘುರಾಂ, ಕೆಜೆಪಿ ಮುಖಂಡ ಎಸ್. ಮಹದೇವಯ್ಯ, ಆದರ್ಶ ಸೇವಾ ಸಂಘದ ಜಿ.ಆರ್. ನಾಗರಾಜು ಇದ್ದರು.