ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಹೊಸ ಮರಳುಗಾರಿಕೆ ನೀತಿಗೆ ಕ್ರಮ'

Rashmi Kasaragodu
Updated On : 16 Jun 2013, 12:36 pm

ಟಿ. ನರಸೀಪುರ: ರಾಜ್ಯಾದ್ಯಂತ ಬೃಹದಾಕಾರವಾಗಿ ಬೆಳೆದ ಮರಳುಗಾರಿಕೆ ಮಾಫಿಯಾವನ್ನು ಪರಿಣಾಮಕಾರಿಯಾಗಿ ತಡೆಯಲು ಹೊಸ ಮರಳುಗಾರಿಕೆ ನೀತಿ ಜಾರಿಗೊಳಿಸಲಾಗುವುದು. ಇದಕ್ಕಾಗಿ ಸಂಪುಟ ಉಪಸಮಿತಿ ರಚಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ತಾಲೂಕಿನ ದಾಸೇಗೌಡನಕೊಪ್ಪಲು ಗ್ರಾಮದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ರೂಪಿಸಿದ ಮರಳುಗಾರಿಕೆ ನೀತಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ, ಬೇರೂರಿದ ಮರಳು ಮಾಫಿಯಾವನ್ನು ತಡೆಗಟ್ಟಿ ವೈಜ್ಞಾನಿಕವಾಗಿ ನೀತಿ ರೂಪಿಸಲು ಅನುವಾಗುವಂತೆ ಕ್ರಮ ಕೈಗೊಳ್ಳಲಾಗುವುದು. ಸಂಪುಟ ಉಪಸಮಿತಿಯು ಈ ಎಲ್ಲ ಅಂಶಗಳನ್ನು ಗಂಭೀರವಾಗಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಅಕ್ರಮ ಮರಳುಗಾರಿಕೆ ತಡೆಯಲು ಕಂದಾಯ, ಗೃಹ, ಸಾರಿಗೆ, ಗಣಿ ಮತ್ತು ಭೂವಿಜ್ಞಾನ, ಲೋಕೋಪಯೋಗಿ ಇಲಾಖೆಗಳಲ್ಲಿ ಸಮನ್ವಯತೆ ಸಾಧಿಸುವಂತೆ ಸಾಮೂಹಿಕ ಜವಾಬ್ದಾರಿ ಒದಗಿಸಲು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಕೃಷ್ಣರಾಜಸಾಗರ ಜಲಾಶಯದ ಎಲ್ಲ ಕಾಲುವೆಗಳನ್ನು ಆಧುನೀಕರಣಗೊಳಿಸಿ ನೀರಿನ ಸಂರಕ್ಷಣೆಯ ಜತೆಗೆ ನೀರು ಅಪವ್ಯಯವಾಗದಂತೆ ನೋಡಿಕೊಳ್ಳಬೇಕಾಗಿದೆ. ಟಿ. ನರಸೀಪುರದ ಬಸ್ ನಿಲ್ದಾಣ ಮತ್ತು ಬಸ್ ಡಿಪೋ ಕಾಮಗಾರಿ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು, ಈ ಕಾಮಗಾರಿಗಳಿಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ನೀರಾವರಿ ವಲಯದ ಮುಖ್ಯ ಎಂಜಿನಿಯರ್ ಬಿ. ಶಿವಶಂಕರ್, ಅಧೀಕ್ಷಕ ಎಂಜಿನಿಯರ್ ಶಂಕರೇಗೌಡ ಇದ್ದರು.
ಸಚಿವರು ದಾಸೇಗೌಡನಕೊಪ್ಪಲು ಗ್ರಾಮದ ತುರುಗನೂರು ಶಾಖಾ ನಾಲೆಯ 5, 11 ಮತ್ತು 12ನೇ ವಿತರಣಾ ನಾಲೆಗಳನ್ನು ಒಟ್ಟು 7.16 ಕೋಟಿ ವೆಚ್ಚದಿಂದ ಅಭಿವೃದ್ಧಿಪಡಿಸುವ ಕಾಮಗಾರಿಗಳ ಶಂಕುಸ್ಥಾಪನೆಯನ್ನು ನೆರವೇರಿಸಿದರು. ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯ ಈ ನಾಲೆಗಳ 35.8 ಕಿ.ಮೀ. ಇದ್ದು, ಇವುಗಳ ಅಭಿವೃದ್ಧಿಯಿಂದ 5,168 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ. ಇದಕ್ಕೂ ಮುನ್ನ ಸಚಿವರು ಟಿ. ನರಸೀಪುರ ತಾಲೂಕಿನ ರಾಮಸ್ವಾಮಿ ಕಾಲುವೆ ಬಳಿ 56 ಲಕ್ಷ ವೆಚ್ಚದಿಂದ ಕೊರಟಗೆರೆ-ಬಾವಲಿ ರಸ್ತೆಯ 800 ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement