ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕನ್ನಡ ಸಾಹಿತ್ಯಕ್ಕೆ ಭಾರತ ಪುಣ್ಯಭೂಮಿ: ದೇಜಗೌ

Rashmi Kasaragodu
Updated On : 16 Jun 2013, 10:08 am

ಕ.ಪ್ರ. ವಾರ್ತೆ   ಮೈಸೂರು   ಜೂ.16
ಕನ್ನಡ ಸಾಹಿತ್ಯದಲ್ಲಿ ರಚನೆಯಾದಷ್ಟು ಸಾಹಿತ್ಯ, ಮಹಾಕಾವ್ಯಗಳು ಮಿಕ್ಕ ಯಾವ ಭಾಷೆಯಲ್ಲಿಯೂ ರಚನೆಯಾಗಿಲ್ಲ. ಆದ್ದರಿಂದ ಕನ್ನಡ ಸಾಹಿತ್ಯಕ್ಕೆ ಭಾರತ ಪುಣ್ಯಭೂಮಿಯಾಗಿದೆ ಎಂದು ನಾಡೋಜ ಡಾ. ದೇಜಗೌ ಅಭಿಪ್ರಾಯಪಟ್ಟರು.
ಮುಖ್ಯಪ್ರಾಣ ಸಾಂಸ್ಕೃತಿಕ ಅಕಾಡೆಮಿಯು ಭಾನುವಾರ ಎಂಜಿನಿಯರುಗಳ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, ನಮ್ಮಲ್ಲಿ ಸಾಹಿತಿಗಳು, ಮಹಾಕವಿಗಳು ಹೆಚ್ಚಿದ್ದಾರೆ. ಅವರಿಂದ ರಚಿತವಾದ ಸಾಹಿತ್ಯ ಸಾಹಸ್ರಾರು ಸಂಖ್ಯೆ ಮೀರಿದೆ ಎಂದರು.
ಭಾರತದ ಇತಿಹಾಸದಲ್ಲಿ ಸಾಹಿತ್ಯ, ಸಂಗೀತ, ಕಲಾ ಕ್ಷೇತ್ರದಲ್ಲಿ ಸಾಕಷ್ಟು ಮಂದಿ ದುಡಿದಿದ್ದಾರೆ. ಆ ಮೂಲಕ ಈ ನೆಲದ ಋಣ ತೀರಿಸುತ್ತಿದ್ದಾರೆ. ವಿದ್ಯಾರ್ಥಿಗಳೂ ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಬೇಕು. ಶೈಕ್ಷಣಿಕ ಕ್ಷೇತ್ರದಲ್ಲಿ ಪರೀಕ್ಷೆ ಎದುರಿಸಿ ಕೇವಲ ಅಂಕ ಗಳಿಸುವುದೊಂದೇ ಮುಖ್ಯ ಗುರಿಯಾಗಬಾರದು. ಅದರ ಜತೆಗೆ ಮಹಾಕಾವ್ಯಗಳು, ಸಾಹಿತ್ಯ ಪ್ರಕಾರಗಳು, ಕವನ, ಕವಿತೆ, ಸಾಮಾಜಿಕ ನೆಲೆಗಟ್ಟಿನಲ್ಲಿ ರಚನೆಯಾದ ಸಾಹಿತ್ಯ ಪ್ರಕಾರಗಳನ್ನು ಓದಬೇಕು ಎಂದು ಸಲಹೆ ನೀಡಿದರು.
ಅಳಿಸಲಾಗದ ಸಂಪತ್ತು ಎಂದರೆ ಜ್ಞಾನ. ಆ ಜ್ಞಾನವನ್ನು ಪಡೆಯಲು ನಿರಂತರ ಅಭ್ಯಾಸ ಮುಖ್ಯ. ಜ್ಞಾನವನ್ನೇ ಆಧಾರವಾಗಿಟ್ಟುಕೊಂಡು ಪಂಪ, ರನ್ನ, ಕುಮಾರವ್ಯಾಸ, ಅಲ್ಲಮಪ್ರಭು, ಬಸವಣ್ಣ ಅವರು ಸಾಧನೆ ಮಾಡಿದರು. ಅವರ ಸಾಮಾಜಿಕ ನಿಲುವು, ಸಮಾಜದ ಬಗ್ಗೆ ಇದ್ದ ಕಾಳಜಿ ಮತ್ತು ಒಡನಾಟ ನಿಮಗೆ ಅರಿವಾಗಬೇಕಾದರೆ, ಅಂತಹ ಮಹಾನ್ ವ್ಯಕ್ತಿಗಳ ಸಾಹಿತ್ಯ ಪ್ರಕಾರಗಳನ್ನು ಅಧ್ಯಯನ ಮಾಡಬೇಕು ಎಂದರು.
ಚಾಮರಾಜ ಕ್ಷೇತ್ರದ ಶಾಸಕ ವಾಸು ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆ ವತಿಯಿಂದ ಸಾವಿರ ರು. ನಗದು ಬಹುಮಾನ ನೀಡಲಾಯಿತು.
ಎಂಜಿನಿಯರುಗಳ ಸಂಸ್ಥೆಯ ಅಧ್ಯಕ್ಷ ಡಾ.ಟಿ. ಅನಂತಪದ್ಮನಾಭ ಅಧ್ಯಕ್ಷತೆ ವಹಿಸಿದ್ದರು. ಮಂಡ್ಯ ಡಿಡಿಪಿಐ ಎಂ.ಡಿ. ಶಿವಕುಮಾರ್, ಪ್ರಾಧ್ಯಾಪಕ ಡಾ. ಭೈರಪ್ಪ, ಅನುಸೂಯ ಕೆಂಪನಹಳ್ಳಿ, ಎಂ.ಎನ್. ವಿಜಯವೆಂಕಟೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement