ಕವಿ ಕಣ್ಣಲ್ಲಿ ಕಲಿಯುಗದ ಪತಿವ್ರತೆ, ಗಣಿ ಧೂಳು...
ಕ.ಪ್ರ. ವಾರ್ತೆ ನಂಜನಗೂಡು ಜೂ.16
ತನ್ನ ಗಂಡನಿಗೆ ಕಣ್ಣಿಲ್ಲವೆಂದು
ತಾನೂ ಕುರುಡಿಯಾದಳು ದ್ವಾಪರಯುಗದ ಒಬ್ಬ ಪತಿವ್ರತೆ
ತನಗೆ ಹಲ್ಲಿಲ್ಲವೆಂದು ಗಂಡನಿಗೆ ಹಲ್ಲು
ಮುರಿಸಿದಳು ಕಲಿಯುಗದ ಪತಿವ್ರತೆ
----
ನೆಲವ ನುಂಗಿ ಸಿಕ್ಕ ಬಿದ್ದರು
ನೆಲದೊಡಲ ಬಗೆದು ಗಣಿಧಣಿಗಳು ದುಂಡಗಾದರು
ಬಂಧು ಬಳಗದ ಮೋಹದಿ ಜನರ ಮರೆತರು
ಮರೆತ ತಪ್ಪಿಗೆ ಸರದಿಯಂತೆ ಸೆರೆಮನೆ ಹೊಕ್ಕರು
ನಾಯಕರು ಸಾರ್ ನಾಯಕರು
---
ಬಾಳೆಂಬ ರಥದಲ್ಲಿ
ಅನುದಿನವೂ ನೊಂದೆ
ಕಾರ್ಮುಗಿಲ ಕತ್ತಲಲ್ಲಿ
ಮುಸ್ಸಂಜೆ ಬೆಳಕಾದೆ
ಮುಂಜಾನೆ ಪೂಜೆಗೆಂದು
ಸಂಜೆ ಕೈದೋಟದಿಂದ
ಬಿಡಿ ಬಿಡಿ ಮೊಗ್ಗು ಹೂಗಳ
ಬಿಡಿಸಿ ತಂದಿದ್ದಳು ನನ್ನವಳು
- ಮೈಸೂರು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಭಾನುವಾರ ನಡೆದ ಕವಿಗೋಷ್ಠಿಯಲ್ಲಿ ಹಲವು ಮಂದಿ ಕವಿಗಳು ತಮ್ಮ ಕವನದ ಮೂಲಕ ಎಲ್ಲರ ಗಮನ ಸೆಳೆದರು.
ಮಧುಪ್ರಸಾದ್ ಹುಣಸೂರು ಕಲಿಯುಗದ ಪತಿವ್ರತೆಯ ಪರಿಚಯ ಮಾಡಿಕೊಟ್ಟರೆ, ಪಿ. ಮಹೇಶ್ಕುಮಾರ್ ನಾಯಕರು ಸಾರ್ ನಾಯಕರು ಕವನದ ಮೂಲಕ ಜನಪ್ರತಿನಿಧಿಗಳ ಭ್ರಷ್ಟ ವ್ಯವಸ್ಥೆಯನ್ನು ಬಿಚ್ಚಿಟ್ಟರು. ಎ.ಎಸ್. ಪುನೀತಾ ಪ್ರೇಮ ಕವನ ವಾಚಿಸಿದರು. ಮ.ಗು. ಬಸವಣ್ಣ ತಮ್ಮ ಕವನದ ಮೂಲಕ ಹೂವ ತಂದು ಸಮ್ಮೇಳನಕ್ಕೆ ಮುಡಿಸಿದರು. ಲಕ್ಷ್ಮೀಶ ಅವರು ಹುಡುಕಿಕೊಡಿ ಅಪ್ಪನ ಎನ್ನುವ ಮೂಲಕ ಮರೆಯಾಗುತ್ತಿರುವ ಕೃಷಿ ಮತ್ತು ರೈತನನ್ನು ನೆನಪಿಸಿದರು. ಸುಜಾತಾ ದುರ್ಗೇಶ್ ಅವರು ಗೋಮಾಂಸ ಕುರಿತು ತಮ್ಮ ಕವನ ವಾಚಿಸಿದರು.
ಉಳಿದಂತೆ ಬಿ. ಸುಜಾತಾ, ಮಂಜುನಾಥ ಶೆಟ್ಟಿ, ಸುರೇಶ್ರಾವ್ ಚವ್ಹಾಣ್, ಸರೋಜಾ ಕೃಷ್ಣಮೂರ್ತಿ, ಬಿ.ವಿ. ಪ್ರವೀಣ್, ಸುಬ್ಬಪ್ಪ, ದೇವನೂರು ಸ್ವಾಮಿಪ್ರಕಾಶ್, ಮ.ನ. ಲತಾ ಮೋಹನ್, ಕುಮಾರಕವಿ, ಎಸ್. ಸತೀಶ್ ದಳವಾಯಿ ಸೇರಿದಂತೆ ಹಲವರು ಕವನ ವಾಚಿಸಿದರು.