ಪರಿಸರ ಬಗ್ಗೆ ಜನರಲ್ಲಿ ತಿಳಿವಳಿಕೆ ಅಗತ್ಯ: ಜಿಟಿಡಿ
ಕ.ಪ್ರ. ವಾರ್ತೆ, ಮೈಸೂರು, ಜೂ.16
ಪರಿಸರ ಸಂರಕ್ಷಣೆ ಕುರಿತಂತೆ ಸಾಮಾನ್ಯ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರು ಹೇಳಿದರು.
ಹೂಟಗಳ್ಳಿಯ ಕೆಎಚ್ಬಿ ಕಾಲೋನಿಯಲ್ಲಿರುವ ಕರಾವಳಿ ಸಾಂಸ್ಕೃತಿಕ ಚಾವಡಿ ಸಂಸ್ಥೆಯು ಭಾನುವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಸಿ ನೆಟ್ಟು ಅವರು ಮಾತನಾಡಿದರು.
ಎಲ್ಲರಿಗೂ ಮಾದರಿಯಾದ ಈ ವಿಶ್ವ ಪರಿಸರ ದಿನಾಚರಣೆಯನ್ನು ಕರಾವಳಿ ಸಾಂಸ್ಕೃತಿಕ ಚಾವಡಿಯವರು ಆಚರಿಸುತ್ತಿರುವುದು ಶ್ಲಾಘನೀಯ. ಈ ನಾಡಿನಲ್ಲಿ ಮರ- ಗಿಡಗಳನ್ನು ಬೆಳೆಸಬೇಕು. ಇದರಿಂದ ಮಾತ್ರ ಮಳೆ ಬರುವುದು. ಮಳೆ ಬಂದರೆ ಮಾತ್ರ ರೈತ ಬೆಳೆ ಬೆಳೆಯಲು ಸಾಧ್ಯ. ಕುಡಿಯುವ ನೀರಿಗೆ, ಪ್ರತಿಯೊಂದಕ್ಕೂ ಪ್ರಮುಖವಾದದ್ದು ಈ ಪರಿಸರ ಎಂದರು.
ಪರಿಸರ ಕಾಪಾಡುವುದರಲ್ಲಿ ಪ್ರಮುಖವಾಗಿ ವಿದ್ಯಾರ್ಥಿಗಳು, ಯುವಕ ಮಿತ್ರರು ಪಾಲ್ಗೊಳಬೇಕು. ಆಗ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಪರಿಸರ ಸಂರಕ್ಷಿಸಲು ಸಾಧ್ಯವಾಗುತ್ತದೆ. ಊರಿಗೊಂದು ವನ, ಪ್ರತಿ ಮನೆಗೆ ಎರಡು ಗಿಡ, ಮಗುವಿಗೊಂದು ಸಸಿ ಬೆಳೆಸಿ, ಪರಿಸರ ಉಳಿಸಿ ಗಿಡಮರಗಳನ್ನು ಪ್ರೀತಿಯಿಂದ ಬೆಳೆಸಿ, ಸ್ನೇಹಮಹಿಯಂತೆ ಕಾಣಬೇಕು. ಬಡಾವಣೆಯಲ್ಲಿ ಶುದ್ಧ ಗಾಳಿಯನ್ನು ಸೇವಿಸಲು ಅನುಕೂಲ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಮಳೆ ಪ್ರಮಾಣ ಕ್ಷೀಣ: ಅರಣ್ಯ ನಾಶದಿಂದ ರಾಜ್ಯದಲ್ಲಿ ಸಂಪೂರ್ಣವಾಗಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಮಳೆ ಪ್ರಮಾಣ ಹೆಚ್ಚು ಮಾಡಲು ಎಲ್ಲಾ ಸಂಘ ಸಂಸ್ಥೆಗಳು ಗಿಡಗಳನ್ನು ನೆಡುವ ಕಾರ್ಯಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಪ್ರತಿ ಶಾಲೆಗಳ ಆವರಣದಲ್ಲಿ, ರಸ್ತೆಗಳ ಬದಿಯಲ್ಲಿ ಸರ್ಕಾರದ ಖಾಲಿ ಜಾಗಗಳಲ್ಲಿ, ಆಸ್ಪತ್ರೆಗಳ ಆವರಣದಲ್ಲಿ, ಸಹಕಾರ ಸಂಘಗಳ ಆವರಣದಲ್ಲಿ ಹಾಗೂ ಕೈಗಾರಿಕೆಗಳ ಆವರಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ನೆಟ್ಟು, ಸಂರಕ್ಷಿಸಿ, ಪರಿಸರ ಕಾಪಾಡಬೇಕು ಎಂದರು.
ಎಸಿಎಫ್ ಪೂರ್ಣಿಮಾ ಮಾತನಾಡಿ, ಈ ಬಡಾವಣೆಯಲ್ಲಿ ತಾವು ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ತಮಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಿಮ್ಮ ಕಾರ್ಯಕ್ರಮಕ್ಕೆ ನನ್ನ ಸಂಪೂರ್ಣ ಬೆಂಬಲವಿದ್ದು, ಇಲಾಖೆ ವತಿಯಿಂದ ಎಲ್ಲಾ ರೀತಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ವೇದಿಕೆ ಗೌರವಾಧ್ಯಕ್ಷ ಡಾ.ದಿನೇಶ್ ಶೆಟ್ಟಿ, ಅಧ್ಯಕ್ಷ ಅಶೋಕ, ನಾಗರಾಜ್, ಬಡಾವಣೆ ನಿವಾಸಿಗಳ ಸಂಘದ ಅಧ್ಯಕ್ಷ ಚಂದ್ರಮೋಳಿ, ಜೆಡಿಎಸ್ ಮುಖಂಡರಾದ ಬೆಳವಾಡಿ ಶಿವಮೂರ್ತಿ, ಹೂಟಗಳ್ಳಿ ಮಂಚೇಗೌಡ, ಗ್ರಾಪಂ ಸದಸ್ಯರಾದ ಸುರೇಶ್, ಮಹೇಶ್, ಮುಖಂಡರಾದ ಶಿವಣ್ಣ, ಮಹದೇವು ಇದ್ದರು.