ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪುಸ್ತಕ ಮಳಿಗೆಯೋ, ವಾಹನ ನಿಲ್ದಾಣವೋ

Rashmi Kasaragodu
Updated On : 16 Jun 2013, 10:50 am

ಕ.ಪ್ರ.ವಾರ್ತೆ   ನಂಜನಗೂಡು   ಜೂ.16
ಸಾಹಿತ್ಯ ಸಮ್ಮೇಳನದ ಪ್ರಮುಖ ಆಕರ್ಷಣೆ ಪುಸ್ತಕ ಮಳಿಗೆ ಎಂಬುವುದರಲ್ಲಿ ಎರಡು ಮಾತಿಲ್ಲ. ಆದರೆ ಪುಸ್ತಕ ಪ್ರದರ್ಶನ ಹಾಗೂ ಮಾರಾಟಕ್ಕೆ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯಾವುದೇ ಸೂಕ್ತ ವ್ಯವಸ್ಥೆ ಒದಗಿಸದೆ ಇರುವುದು ಪ್ರಕಾಶಕರ ಅಸಮಾಧಾನಕ್ಕೆ ಕಾರಣವಾಯಿತು.
ನಂಜನಗೂಡಿನ ಶ್ರೀಕಂಠೇಶ್ವರ ಕಲಾಮಂದಿರ ಮುಂಭಾಗದಲ್ಲಿ ಆಯೋಜಿಸಿರುವ ಪುಸ್ತಕ ಮಾರಾಟ ತಾಣ. ಮೈಸೂರು ಜಿಲ್ಲಾ ಹನ್ನೆರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪುಸ್ತಕ ಪ್ರದರ್ಶನಕ್ಕಾಗಿ ನಾಡಿನ ವಿವಿಧ ಜಿಲ್ಲೆಗಳಿಂದ 30ಕ್ಕೂ ಹೆಚ್ಚಿನ ಮಾರಾಟಗಾರರು ಭಾಗವಹಿಸಿದ್ದರು.
ತಾವು ತಂದಿರುವ ಪುಸ್ತಕಗಳನ್ನು ದಾರಿಯ ಬದಿಯಲ್ಲಿ ಸಣ್ಣ ಟೇಬಲ್ಗಳಲ್ಲಿ ಹಣ್ಣು ತರಕಾರಿಗಳಂತೆ ಇಟ್ಟುಕೊಂಡು ಓದುಗರಿಗೆ ಕಾಯುತ್ತಿರುವುದರ ಜತೆಗೆ ಮಳೆ ಬಂದರೆ ಎಲ್ಲಿ ನೆನೆಯುತ್ತದೆಯೋ ಅಥವಾ ಗಾಳಿ ಬಂದರೆ ಎಲ್ಲಿ ತೂರಿ ಹೋಗುತ್ತದೆಯೋ ಎಂಬ ಆತಂಕದಲ್ಲಿ ಪುಸ್ತಕಗಳ ರಕ್ಷಣೆಗೆ ಮುಂದಾಗಿದ್ದು ಕಂಡುಬಂತು.
ಛಾವಣಿಯನ್ನಾದರೂ ಮಾಡಬೇಕಿತ್ತು: ಹೇಳಿಕೇಳಿ ಇದು ಮಳೆಗಾಲ. ಇಂತಹ ಸಂದರ್ಭದಲ್ಲಿ ಮಳೆಯ ರಕ್ಷಣೆಗೆ ಸೂಕ್ತ ಛಾವಣಿ ಇರುವ ವ್ಯವಸ್ಥೆಯನ್ನು ಸಂಘಟಕರು ಮಾಡಿಕೊಡಬೇಕಿತ್ತು ಎಂಬುದು ಪ್ರಕಾಶಕರ ಅನಿಸಿಕೆ. ಪ್ರಕಾಶಕರಿಗೆ ಮಲಗಲು ಸೂಕ್ತ ಜಾಗ ಒದಗಿಸದ ಕಾರಣ ಪುಸ್ತಕ ತಂದಿರುವ ವಾಹನದಲ್ಲಿಯೇ ಮಲಗಬೇಕಾಯಿತು. ಊಟದ ಏರ್ಪಾಡು ಕೂಡ ನಮಗೆ ಕಲ್ಪಿಸಿರಲಿಲ್ಲ. ಇದು ಸಾಹಿತ್ಯ ಸಮ್ಮೇಳನವೋ ಧಾರ್ಮಿಕ ಜಾತ್ರೆಯೋ ಎಂಬುದು ತಿಳಿಯದಾಗಿದೆ. ಮೈಸೂರು ಎಂದರೆ ಸಾಂಸ್ಕೃತಿಕ ನಗರ. ಇಂತಹ ಜಿಲ್ಲಾ ಸಮ್ಮೇಳನದಲ್ಲಿ ಎಲ್ಲಾ ಅನುಕೂಲ ಇರುತ್ತದೆ ಎಂದು ಭಾವಿಸಿದ್ದ ನಮ್ಮ ನಂಬಿಕೆ ಹುಸಿಯಾಯಿತು ಎಂದು ತಮ್ಮ ಅಳಲು ತೋಡಿಕೊಂಡವರು ಬೆಂಗಳೂರಿನ ಮಹದೇವ ಪ್ರಕಾಶನದ ನಾಗೇಶ್.
ರಾತ್ರಿಯೆಲ್ಲಾ ಇಲ್ಲಿನ ಆವರಣದಲ್ಲಿಯೇ ಮಲಗಿ ಸೊಳ್ಳೆಗಳಿಂದ ಕಡಿಸಿಕೊಂಡಾಗಿದೆ. ಎಲ್ಲಿ ಡೆಂಘೀ ಬಂದೀತು ಎನ್ನುವ ಆತಂಕ ಕಾಡುತ್ತಿದೆ. ಸರಿಯಾದ ವ್ಯವಸ್ಥೆ ಮಾಡಲಾಗದ ಮೇಲೆ ನಮಗೆ ಯಾಕಾದರೂ  ಆಹ್ವಾನಿಸಬೇಕು ಎಂದು ಮಂಗಳೂರಿನ ಶಾಂತಿ ಪ್ರಕಾಶನದ ಖಲೀಲ್ ಆಕ್ರೋಶ ವ್ಯಕ್ತಪಡಿಸಿದರು.
ಮಾರಾಟದ ಮುಂಭಾಗದಲ್ಲಿ ಉದ್ದಕ್ಕೂ ದ್ವಿಚಕ್ರ ವಾಹನಗಳನ್ನು ಅಡ್ಡವಾಗಿ ನಿಲ್ಲಿಸಿರುವುದರಿಂದ ಪುಸ್ತಕ ನೋಡಲು ಜನರು ಹೆಚ್ಚಾಗಿ ಬರಲಿಲ್ಲ. ಇದು ಪುಸ್ತಕ ಮಳಿಗೆಯೋ ವಾಹನ ನಿಲ್ದಾಣವೋ ಎಂಬ ಪ್ರಶ್ನೆ ಕಾಡಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement