ವಿಮರ್ಶಕರಿಂದ ದಲಿತ ಸಾಹಿತ್ಯ ಕಡೆಗಣನೆ: ಡಿಸಿಪಿ ಮಾಲಗತ್ತಿ
ಕ.ಪ್ರ. ವಾರ್ತೆ ಮೈಸೂರು ಜೂ.16
ಕೆಲವು ವಿಮರ್ಶಕರು ಇಂದಿಗೂ ಕೂಡ ದಲಿತರ ಸಾಹಿತ್ಯವನ್ನು ಕಡೆಗಣಿಸುತ್ತಿದ್ದಾರೆ ಎಂದು ಡಿಸಿಪಿ ಬಸವರಾಜ ವೈ. ಮಾಲಗತ್ತಿ ವಿಷಾದಿಸಿದರು.
ಭಾನುವಾರ ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಚಿತ್ರದುರ್ಗ ಜಿಲ್ಲೆಯ ಶಾಂತಮ್ಮ ಪ್ರಕಾಶನ ಹಾಗೂ ಮೈಸೂರಿನ ದ್ರಾವಿಡ್ ಪಬ್ಲಿಕೇಶನ್ ಹೊರತಂದ ಪ್ರೊ.ಎ.ಕೆ. ಹಂಪಣ್ಣ ಅವರ ದೀಪವಂಶ, ಉಳಿರಂಪಿಗೆ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ದಲಿತ ಸಾಹಿತಿಗಳ ಪುಸ್ತಕಗಳಿಗೂ ಅಸ್ಪೃಶ್ಯತೆಯ ಸೋಂಕು ತಗುಲಿದೆ. ಬಸವಣ್ಣ ಅವರ ಕ್ರಾಂತಿ ಅವರೊಂದಿಗೆ ಸಮಾಪ್ತಿಗೊಂಡಿತು ಎಂದರು.
ಚಂದನ ವಾಹಿನಿ ಕಾರ್ಯಕ್ರಮ ನಿರ್ಮಾಪಕ ಎಂ.ಎ. ಜಯಚಂದ್ರ ಮಾತನಾಡಿ, ಎ.ಕೆ. ಹಂಪಣ್ಣ ಅವರ ಕವನದ ಸಾಲುಗಳು ಐಕ್ಯತೆಯ ಆಶಯವನ್ನು ಪ್ರತಿಬಿಂಬಿಸುತ್ತದೆ. ಸಮಾಜಮುಖಿ ಕನಸು ಕಾಣುವ ಜತೆಗೆ ಬದುಕಿನ ಕಟು ವಾಸ್ತವ ಸ್ಥಿತಿಯನ್ನು ತೋರ್ಪಡಿಸುತ್ತದೆ ಎಂದು ತಿಳಿಸಿದರು.
ಲೇಖಕ ಎಂ.ಕೆ. ಹಂಪಣ್ಣ, ಪ್ರೊ.ಕುಂ.ಸಿ. ಉಮೇಶ್, ಪ್ರೊ.ಬಿ.ವಿ. ವಸಂತಕುಮಾರ್ ಇದ್ದರು.