ತಾಲೂಕು ಸಮಗ್ರ ಅಭಿವೃದ್ಧಿಗೆ ಕ್ರಮ: ಶಾಸಕ ವಿ. ವೆಂಕಟೇಶ್
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಜೂ. 17
ಜನರು ತಮ್ಮ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಗೆ ತಾವು ಎಂದೂ ದ್ರೋಹ ಬಗೆಯದೆ, ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಶಾಸಕ ಕೆ.ವೆಂಕಟೇಶ್ ಹೇಳಿದರು.
ಇಲ್ಲಿನ ಶಾಸಕರ ಕಚೇರಿಗೆ ಮೊದಲ ಬಾರಿ ಭೇಟಿ ನೀಡಿ ಪೂಜೆ ಸಲ್ಲಿಸಿ ಕಾರ್ಯಾರಂಭಿಸಿ ಮಾತನಾಡಿದ ಅವರು, ಮತದಾರರು ತಮ್ಮನ್ನು 5ನೇ ಬಾರಿಗೆ ಆಯ್ಕೆ ಮಾಡುವ ಮೂಲಕ ಮತ್ತೊಮ್ಮೆ ತಾಲೂಕಿನ ಅಭಿವೃದ್ಧಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರ ನಿರೀಕ್ಷೆಯನ್ನು ಸುಳ್ಳು ಮಾಡುವುದಿಲ್ಲ. ಈ ಹಿಂದೆಯೂ ಸಹ ತಾಲೂಕಿನಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಪ್ರಸ್ತುತ ರಾಜ್ಯದಲ್ಲಿ ತಮ್ಮದೆ ಪಕ್ಷದ ಸರ್ಕಾರ ಹಾಗೂ ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿರುವುದರಿಂದ ತಾಲೂಕಿನ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ನೇತೃತ್ವದಲ್ಲಿ ಸ್ನೇಹ ಜೀವಿ ಸಂಘದ ವತಿಯಿಂದ ಶಾಸಕರಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು.
ಮೈಸೂರು ನಗರಪಾಲಿಕೆ ಸದಸ್ಯ ಪಿ.ಪ್ರಶಾಂತ್ಗೌಡ, ತಾಪಂ ಸದಸ್ಯರಾದ ಬಿ.ವಿ. ಅನಿತಾ, ಮಹದೇವ್, ಪಪಂ ಸದಸ್ಯೆ ಅನಿತಾಶೇಖರ್, ಸುವರ್ಣ, ಸಣ್ಣಪ್ಪ, ಅಬ್ದುಲ್ ಅಜೀಜ್, ಮಂಜು, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಹೊಲದಪ್ಪ, ಮಾಜಿ ಅಧ್ಯಕ್ಷ ಪರಮೇಶ್, ಟಿಎಪಿಸಿಎಂಎಸ್ ಸದಸ್ಯ ಪಿ.ಎನ್. ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾನ್ಸೂನ್ ಚಂದ್ರು, ನೀಲಂಗಾಲ ಜಯಣ್ಣ ಇದ್ದರು.