ನಿಲ್ಲದ ಡೆಂಘೀ ಹಾವಳಿ: ಕ್ರಮಕ್ಕೆ ಜಿಟಿಡಿ ಸೂಚನೆ
ಕ.ಪ್ರ.ವಾರ್ತೆ ಮೈಸೂರು ಜೂ. 17
ಚಾಮುಂಡೇಶ್ವರಿ ಕ್ಷೇತ್ರದ ಕೆಲವು ಗ್ರಾಮಗಳಲ್ಲಿ ಮತ್ತೆ ಡೆಂಘೀ ಜ್ವರ ಕಾಣಿಸಿಕೊಂಡಿದ್ದು, ಮುಂಜಾಗ್ರತಾ ಕ್ರಮ ವಹಿಸುವಂತೆ ಶಾಸಕ ಜಿ.ಟಿ. ದೇವೇಗೌಡ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಾಲೇಗೌಡರಿಗೆ ಸೂಚಿಸಿದರು.
ಇಲ್ಲಿನ ಕಾಮಾಕ್ಷಿ ಆಸ್ಪತ್ರೆಯಲ್ಲಿ ಡೆಂಘೀ ಜ್ವರದಿಂದ ದಾಖಲಾಗಿರುವ ಗಣಗರಹುಂಡಿಯ ಆಶಾ ಅವರನ್ನು ಭೇಟಿ ಮಾಡಿ ಅವರು ಮಾತನಾಡಿದರು. ಹುಯಿಲಾಳು, ಕೆ.ಎಂ. ಹಳ್ಳಿಗಳಲ್ಲಿಯೂ ಡೆಂಘೀ ಜ್ವರದಿಂದ ಕೆಲವರು ದಾಖಲಾಗಿದ್ದು, ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಕ್ಷೇತ್ರದ ಎಲ್ಲ ನೀರಿನ ಟ್ಯಾಂಕ್ಗಳನ್ನು ಶುದ್ಧಗೊಳಿಸಬೇಕು. ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು. ಸಾರ್ವಜನಿಕರು ಮನೆಗಳಲ್ಲಿ ವಾರಗಟ್ಟಲೆ ನೀರನ್ನು ಶೇಖರಣೆ ಮಾಡದೆ, ಪ್ರತಿದಿನ ಶುದ್ಧವಾದ ನೀರನ್ನು ಕಾಯಿಸಿ ಕುಡಿಯಬೇಕು ಎಂದ ಅವರು, ಸರ್ಕಾರ ಎಷ್ಟೇ ಖರ್ಚಾದರೂ ಸಾರ್ವಜನಿಕರ ಆರೋಗ್ಯ ಕಾಪಾಡಲು ಭದ್ರವಾಗಿದೆ ಎಂದು ಹೇಳಿದರು. ಬೆಳವಾಡಿ ಗ್ರಾಪಂ ಮಾಜಿ ಅಧ್ಯಕ್ಷ ಶಿವಮೂರ್ತಿ, ರಾಜು, ಕೃಷ್ಣೇಗೌಡ ಇದ್ದರು.