ಬ್ಯಾರಕ್ ಸೆಲ್ನಲ್ಲಿ ಬಚ್ಕಾನ್
ಮೈಸೂರು: ಬೆಳಗಾವಿಯ ಹಿಂಡಲಗಾ ಕಾರಾಗೃಹದಿಂದ ಮೈಸೂರು ಕಾರಾಗೃಹಕ್ಕೆ ಕರೆತಂದಿರುವ ವಿಚಾರಣಾಧೀನ ಕೈದಿ ಹಾಗೂ ಭೂಗತ ಪಾತಕಿ ಚೋಟಾರಾಜನ್ ಸಹಚರ ಬಚ್ಕಾನ್ನನ್ನು ಇಲ್ಲಿನ ವಿಶೇಷ ಸೆಲ್ನಲ್ಲಿ ಇಡಲಾಗಿದೆ. ಭಾನುವಾರ ರಾತ್ರಿ 10 ಗಂಟೆ ಸುಮಾರಿನಲ್ಲಿ ಆತನನ್ನು ನಗರದ ಕೇಂದ್ರ ಕಾರಾಗೃಹಕ್ಕೆ ಕರೆತರಲಾಯಿತು. ಇಲ್ಲಿನ ಬ್ಯಾರಕ್ ನಂ. 19ರ ವಿಶೇಷ್ ಸೆಲ್ ಆತನನ್ನು ಇರಿಸಲಾಗಿದೆ. ಪುಂಡ ಕೈದಿಗಳನ್ನು ಮಣಿಸಲು ಈ ಬ್ಯಾರಕ್ ಸೆಲ್ ಬಳಸಲಾಗುತ್ತದೆ. ಈ ಸೆಲ್ಗೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಅಲ್ಲದೆ ಶಸ್ತ್ರಸಜ್ಜಿತ ಪೊಲೀಸ್ ಭದ್ರತೆ ಸಹ ಇದೆ. ಅಲ್ಲದೆ 24 ಗಂಟೆಯೂ ಆತನ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ. ಇದೇ ಸೆಲ್ನಲ್ಲಿ ನಿತ್ಯಾನಂದನನ್ನು ಇಡಲಾಗಿತ್ತು ಎನ್ನಲಾಗಿದೆ.
ಉಮಾಶಂಕರ್ ಕೆಎಂಎಫ್ ನಿರ್ದೇಶಕ
ಮೈಸೂರು: ಕರ್ನಾಟಕ ಸಹಕಾರಿ ಹಾಲು ಮಹಾ ಮಂಡಳದಲ್ಲಿ ಸೋಮವಾರ ನಡೆದ 244ನೇ ಆಡಳಿತ ಮಂಡಳಿ ಸಭೆಯಲ್ಲಿ ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಮಹಾಮಂಡಳದ ಪ್ರತಿನಿಧಿಯಾಗಿ ಕೆ. ಉಮಾಶಂಕರ್ ಅವರನ್ನು ಕೋ ಆಪ್ ಮಾಡಿಕೊಳ್ಳಲಾಗಿದೆ ಎಂದು ಒಕ್ಕೂಟದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
ಪದಾಧಿಕಾರಿಗಳ ನೇಮಕ
ಮೈಸೂರು: ಕರ್ನಾಟಕ ರಕ್ಷಣಾ ವೇದಿಕೆ ವರುಣ ಕ್ಷೇತ್ರದ ಅಧ್ಯಕ್ಷರನ್ನಾಗಿ ಇಮ್ಮಾವು ಎಸ್. ಮಹೇಶಪ್ರಸಾದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಡಿ.ಎಸ್. ಜಯಚಂದ್ರ, ಜಿಲ್ಲಾ ವಕ್ತಾರರನ್ನಾಗಿ ಆರ್. ಗುರುದತ್ ಅವರನ್ನು ನೇಮಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಪ್ರವೀಣ್ಕುಮಾರ್ ತಿಳಿಸಿದ್ದಾರೆ.
ಅಯೂಬ್ಖಾನ್ ನೇಮಕ: ಸಮಾಜ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾಗಿ ಅಯೂಬ್ಖಾನ್ ನೇಮಕವಾಗಿದ್ದಾರೆ.
20ಕ್ಕೆ ಫೋನ್ ಇನ್ ಕಾರ್ಯಕ್ರಮ
ಮೈಸೂರು: ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜೂ.20ರ ಬೆಳಗ್ಗೆ 10 ರಿಂದ 11ರವರೆಗೆ ಸಾರ್ವಜನಿಕರ ಕುಂದುಕೊರತೆ ಅಹವಾಲುಗಳನ್ನು ಆಲಿಸುವ ಫೋನ್ ಇನ್ ಕಾರ್ಯಕ್ರಮ ಜರುಗಲಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರು ತಮ್ಮ ಸಮಸ್ಯೆಗಳ ಅಹವಾಲುಗಳನ್ನು ದೂ.1077 ಅಥವಾ 2423800 ಮೂಲಕ ಜಿಲ್ಲಾಧಿಕಾರಿಗಳಿಗೆ ತಿಳಿಸಬಹುದು. ಕಾರ್ಯಕ್ರಮದ ನಂತರ ಖುದ್ದು ಹಾಜರಾಗುವ ನಗರ ಮತ್ತು ಗ್ರಾಮೀಣ ಪ್ರದೇಶದ ಸಾರ್ವಜನಿಕರ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಲು ಹೆಚ್ಚುವರಿ ಜಿಲ್ಲಾಧಿಕಾರಿ ನಾಗನಾಯಕ್ ಕೋರಿದ್ದಾರೆ.
ಜು.6ಕ್ಕೆ ಮುಕ್ತ ವಿವಿ ಘಟಿಕೋತ್ಸವ
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಾರ್ಷಿಕ ಘಟಿಕೋತ್ಸವವು ಜು.6 ರಂದು ಬೆಳಗ್ಗೆ 11ಕ್ಕೆ ನಗರದ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಕುಲಪತಿ ಪ್ರೊ.ಎಂ.ಜಿ. ಕೃಷ್ಣನ್ ಹೇಳಿದರು. ಇತಿಹಾಸಕಾರ, ಅಂಕಣಕಾರ ಡಾ.ರಾಮಚಂದ್ರ ಗುಹಾ ಅವರು ಘಟಿಕೋತ್ಸವ ಭಾಷಣ ಮಾಡುವರು. ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಭಾಗವಹಿಸುವರು ಎಂದು ಸುದ್ದಿಗಾರರಿಗೆ ತಿಳಿಸಿದರು.
ಕಾರಂತ, ಲೋಹಿಯಾ ಪೀಠ: ಮುಕ್ತ ವಿವಿಯಲ್ಲಿ ಬಿ.ವಿ. ಕಾರಂತ, ರಾಮಮನೋಹರ ಲೋಹಿಯಾ ಅಧ್ಯಯನಪೀಠ ಆರಂಭಿಸಲು ಸಂಬಂಧಪಟ್ಟ ಪ್ರಾಧಿಕಾರಗಳು ಒಪ್ಪಿಗೆ ನೀಡಿವೆ ಎಂದು ಅವರು ಹೇಳಿದರು.