ನ್ಯಾಯಕ್ಕಾಗಿ ವೃದ್ಧನ ಮನವಿ
ಎಚ್.ಡಿ. ಕೋಟೆ: ತಾಲೂಕಿನ ಸರಗೂರು ಪಟ್ಟಣದ ಸರ್ವೆ ನಂ.102, 109ರ 3.20 ಎಕರೆ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡು ವಿನಾಕಾರಣ ತೊಂದರೆ ನೀಡುತ್ತಿದ್ದು, ಸಂಬಂಧಪಟ್ಟವರು ಕ್ರಮ ಕೈಗೊಂಡು ತಮಗೆ ನ್ಯಾಯ ಕೊಡಿಸುವಂತೆ ಸರಗೂರಿನ ಡಿ.ಎಲ್. ರತ್ನಾಕರಶೆಟ್ಟಿ ಮನವಿ ಮಾಡಿದ್ದಾರೆ. ಸುಮಾರು 40 ವರ್ಷಗಳ ಹಿಂದೆ ಈ ಜಮೀನನ್ನು ಖರೀದಿಸಿದ್ದೆ. ಆಗ ಆ ಪ್ರದೇಶವೆಲ್ಲ ಕಾಡುಮಯವಾಗಿತ್ತು. ನಂತರ 1973 ರಲ್ಲಿ ಕಾಡು ತೆಗೆಸಿದೆ. 1975 ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಉಳುವವನೆ ಭೂಮಿ ಒಡೆಯ ಕಾಯಿದೆ ಜಾರಿಗೆ ಬಂದಿತು. ಆದರೆ, ಉಳುಮೆ ಮಾಡಲು ಜಮೀನನ್ನು ಯಾರಿಗೂ ನೀಡಿರಲಿಲ್ಲ. ಇತ್ತೀಚೆಗೆ ಕೆಲವರು ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದೂರಿದ್ದಾರೆ. ಈ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್ನಲ್ಲಿ ದಾವೆ ಹೂಡಿದ್ದೆ. ವಿಚಾರಣೆ ನಡೆಸಿದ ನ್ಯಾಯಾಧೀಶರು ನನ್ನ ಪರ ಆದೇಶ ನೀಡಿದರು. ಈ ಆದೇಶ ಬಂದ ನಂತರವೂ ಅದೇ ವ್ಯಕ್ತಿಗಳು ಒತ್ತುವರಿ ತೆರವುಗೊಳಿಸಲಿಲ್ಲ. ಬಳಿಕ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಐಜಿ ಅವರಿಗೂ ನ್ಯಾಯ ಕೊಡಿಸುವಂತೆ ಮನವಿ ಸಲ್ಲಿಸಿದ್ದೆ. ಸರಗೂರು ಠಾಣೆ ಪೊಲೀಸರು ನ್ಯಾಯ ಕೊಡಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಅವರು ಅಲವತ್ತುಕೊಂಡಿದ್ದಾರೆ. ಈ ಬಗ್ಗೆ ಲೋಕಾಯುಕ್ತರು, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ, ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ- ಹೀಗೆ ಹಲವು ಮಂದಿಗೆ ಮನವಿಪತ್ರಗಳನ್ನು ನೀಡಿದ್ದಾರೆ.
ಮಹಿಳೆ, ಮಕ್ಕಳ ಆಸ್ಪತ್ರೆಗೆ ಹಣ ಬಿಡುಗಡೆ
ಕೆ.ಆರ್. ನಗರ: ಪಟ್ಟಣದಲ್ಲಿ ನೂತನವಾಗಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಲು ರಾಜ್ಯ ಸರ್ಕಾರದಿಂದ ಆಡಳಿತಾತ್ಮಕ ಮಂಜೂರಾತಿ ದೊರೆತ್ತಿದ್ದು 7.5 ಕೋಟಿ ಹಣ ಬಿಡುಗಡೆಯಾಗಿದೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು. ಛತ್ರಪತಿ ಶಿವಾಜಿ ಮಹಾರಾಜರ 386ನೇ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಬಾರಿ ನಾನು ಶಾಸಕನಾಗಿದ್ದಾಗ ಆಯುರ್ವೇದ ಆಸ್ಪತ್ರೆ ಮಂಜೂರು ಮಾಡಿಸಿದ್ದು ಈಗಾಗಲೇ ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗಿದೆ ಎಂದರು. ಮಹಿಳೆಯರು ಮತ್ತು ಮಕ್ಕಳಿಗೆ ಪ್ರತ್ಯೇಕವಾಗಿ ಆಸ್ಪತ್ರೆ ಮಂಜೂರು ಮಾಡಬೇಕೆಂದು ನಾನು ಹಿಂದಿನ ಬಿಜೆಪಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರಿಂದ ಸರ್ಕಾರ 12-13ನೇ ಸಾಲಿನ ಎನ್ಆರ್ಎಚ್ಎಂ ಯೋಜನೆಯಡಿ ಮಂಜೂರು ಮಾಡಿದ್ದು ಶ್ರೀಘ್ರ ಕಾಮಗಾರಿ ಆರಂಭಕ್ಕೆ ಚಾಲನೆ ನೀಡಲಾಗುತ್ತದೆ ಎಂದರು.