ಭೂಮಿಗೆ ಲಘು ಪೋಷಕಾಂಶ ಸೇರಿಸಿದರೆ ಉತ್ತಮ ಇಳುವರಿ
ಕ.ಪ್ರ.ವಾರ್ತೆ ರಾವಂದೂರು ಜೂ. 18
ಮಣ್ಣು ಪರೀಕ್ಷೆಯ ಆಧಾರದ ಮೇಲೆ ಭೂಮಿಗೆ ಬೇಕಾಗುವ ಪ್ರಧಾನ ಹಾಗೂ ಲಘು ಪೋಷಕಾಂಶಗಳು ಮತ್ತು ಸಾವಯವ ಗೊಬ್ಬರವನ್ನು ಬಿತ್ತನೆ ಮುಂಚಿತವಾಗಿ ಭೂಮಿಗೆ ಸೇರಿಸಿದರೆ ಉತ್ತಮ ಫಸಲು ಬರುತ್ತದೆ ಎಂದು ಕೃಷಿ ವಿಜ್ಞಾನಿಹೊಂಬಯ್ಯ ಹೇಳಿದರು.
ಬೆಟ್ಟದಪುರ ಹೋಬಳಿ ಬೆಟ್ಟದತುಂಗಾ ಗ್ರಾಮದಲ್ಲಿ ಜಲಾನಯನ ಇಲಾಖೆ ಆವರಣದಲ್ಲಿ ಹೋಬಳಿ ಮಟ್ಟದ ಭೂ ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಣ್ಣಿನ ಫಲವತ್ತತೆ ಇಂದಿನ ಪರಿಸ್ಥಿತಿಯಲ್ಲಿ ಕ್ಷೀಣಿಸುತ್ತಿದ್ದು, ಭೂ ಚೇತನ ಯೋಜನೆ ಮಣ್ಣಿನ ಫಲವತ್ತೆಯನ್ನು ಹೆಚ್ಚಿಸುವ ಪ್ರಮುಖ ಯೋಜನೆಯಾಗಿದೆ. ಇದರ ಸದುಪಯೋಗವನ್ನು ಎಲ್ಲ ರೈತರು ಪಡೆದುಕೊಳ್ಳಬೇಕೆಂದು, ಇದರೊಂದಿಗೆ ರೈತರು ತಳಿಯ ಆಯ್ಕೆ ಬೀಜೋಪಚಾರ, ಬೀಜ ಮೊಳಕೆ ಮತ್ತು ಗಣಿಗಾರಿಕೆ ಪೋಷಕಾಂಶಗಳ ಕಿರು ಅಧ್ಯಯನ, ಸೂಪರ್ ಕಾಂಪೋಸ್ಟ್ ಗೊಬ್ಬರ ತಯಾರಿಕೆ, ಪ್ರಾತ್ಯಕ್ಷತೆ ಕೀಟರೋಗ ಬಾಧೆ ನಿರ್ವಹಣೆ, ಮಣ್ಣಿನ ಫಲವತ್ತತೆ, ತೇವಾಂಶ ನಿರ್ವಹಣೆ, ಗುಂಪು ರಚನೆ ಹಾಗೂ ರೈತರ ಸಮಸ್ಯೆಗಳಿಗೆ ಅನುಗುಣವಾಗಿ ಭೂ ಚೇತನ ಅನುವುಗಾರರು ಗ್ರಾಮ ಮಟ್ಟದಲ್ಲಿ ಸ್ಪಂದಿಸಿದಲ್ಲಿ ರೈತರಲ್ಲಿ ಆತ್ಮ ವಿಶ್ವಾಸದ ಜತೆಗೆ ಅವರ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ನಾರಾಯಣ ರಾಜೇ ಅರಸ್, ಪ್ರಗತಿಪರ ರೈತ ಕೆ.ಎಸ್. ಸ್ವಾಮಿಗೌಡ ಮಾತನಾಡಿದರು. ಆತ್ಮ ವಿಷಯ ತಜ್ಞ ಎ.ಜೆ. ಗಣೇಶ್, ಸಹಾಯಕ ಕೃಷಿ ಅಧಿಕಾರಿ ನವ್ಯ ನಾಣಯ್ಯ, ಜಯರಾಮ ರಾಜೇ ಅರಸ್, ಪ್ರಫುಲ್ಲ, ಉದ್ದೇಶ್ ಹಾಗೂ ಭೂ ಚೇತನ ಅನುವುಗಾರರು ಭಾಗವಹಿಸಿದ್ದರು.