ಪಾಲಿಕೆಯಿಂದ 3 ಕ್ಷಿಪ್ರ ಕಾರ್ಯಪಡೆ ರಚನೆ
ಕ.ಪ್ರ.ವಾರ್ತೆ ಮೈಸೂರು ಜೂ. 19
ಮಳೆಗಾಲದ ತುರ್ತು ಸಂದರ್ಭಗಳಲ್ಲಿ ಕಾರ್ಯ ನಿರ್ವಹಿಸಲು ನಗರಪಾಲಿಕೆ ಮೂರು ಕ್ಷಿಪ್ರ ಕಾರ್ಯಪಡೆಗಳನ್ನು ರಚಿಸಿದೆ. ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹರಾಜ ಕ್ಷೇತ್ರದಲ್ಲಿ ಈ ಮೂರು ತಂಡಗಳು ಕಾರ್ಯ ನಿರ್ವಹಿಸಲಿವೆ.
ಮುಂಗಾರು ಮಳೆ ಆರಂಭವಾಗಿದ್ದು ಮಳೆ ನೀರು ತಗ್ಗು ಪ್ರದೇಶಕ್ಕೆ ನುಗ್ಗುವುದು, ಗಾಳಿಯ ರಭಸಕ್ಕೆ ಮರಗಳು ಬೀಳುವುದು ಮುಂತಾದ ತುರ್ತು ಸಂದರ್ಭಗಳನ್ನು ಸಮರ್ಪಕವಾಗಿ ನಿರ್ವಹಿಸಲು 3 ಕ್ಷೇತ್ರಗಳಿಗೆ 3 ತಂಡಗಳನ್ನು ರಚಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ತಿಳಿಸಿದ್ದಾರೆ.
ಈ ಮೂರು ತಂಡಗಳು ರಾತ್ರಿಪಾಳಿಯಲ್ಲಿ ಕಾರ್ಯ ನಿರ್ವಹಿಸಲಿವೆ. ಸದರಿ ತಂಡಗಳಲ್ಲಿ ವಾರ್ಡ್ ವ್ಯಾಪ್ತಿಯ ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್, ಆರೋಗ್ಯ ಪರಿವೀಕ್ಷಕರು, ವರ್ಕ್ ಇನ್ಸ್‌ಪೆಕ್ಟರ್ ಹಾಗೂ ಗ್ಯಾಂಗ್ ಮೆನ್‌ಗಳು ಇರುತ್ತಾರೆ. ಇವರು ರಾತ್ರಿ ವೇಳೆಯಲ್ಲಿ ಮಳೆಯಿಂದ ತೊಂದರೆ ಉಂಟಾದ ಸ್ಥಳಗಳಿಗೆ ತೆರಳಿ ತುರ್ತು ಕ್ರಮಗಳನ್ನು ಕೈಗೊಳ್ಳುತ್ತಾರೆ.
ಈ ತಂಡದ ಜತೆಯಲ್ಲಿ ಒಳಚರಂಡಿ ವಿಭಾಗದ ನೌಕರರು ಕಾರ್ಯ ನಿರ್ವಹಿಸಲಿದ್ದು, ಸೆಸ್ ಪೂಲ್ ಎಂಪ್ಟಿಯಲ್ ಹಾಗೂ ಜಟ್ಟಿಂಗ್ ಯಂತ್ರಗಳನ್ನು ನೀಡಲಾಗಿದೆ. ಜೊತೆಗೆ ಎಲೆಕ್ಟ್ರಿಕ್ ಕಟರ್, ಸಕ್ಷನ್ ಪಂಪ್ ಮುಂತಾದ ಅಗತ್ಯ ಸಲಕರಣೆಗಳನ್ನು ತಂಡಗಳಿಗೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಳೆಗಾಲವಾದ್ದರಿಂದ ಮಳೆ ನೀರು ಚರಂಡಿಯಲ್ಲಿ ಹೂಳು ತೆಗೆದುವುದು, ವಿದ್ಯುತ್ ಕಂಬಕ್ಕೆ ಅಡ್ಡವಾಗಿರುವ ರೆಂಬೆಗಳನ್ನು ಕತ್ತರಿಸುವುದು, ಮಳೆ ನೀರು ಚರಂಡಿಯ ಶೋಲ್‌ಡರ್ ಡ್ರೈನ್‌ನಲ್ಲಿ ಶುಚಿಗೊಳಿಸುವುದು ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಈಗಾಗಲೇ ವಲಯ ಸಹಾಯಕ ಆಯುಕ್ತರು ಹಾಗೂ ಸಹಾಯಕ ತೋಟಗಾರಿಕೆ ನಿರ್ದೇಶಕರುಗಳಿಗೆ ಸೂಚಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಮಳೆಯಿಂದ ತೊಂದರೆಯಾದ ಸಂದರ್ಭದಲ್ಲಿ ಸಾರ್ವಜನಿಕರು ಪಾಲಿಕೆ ನಿಯಂತ್ರಣ ಕೊಠಡಿ ದೂ. 2440891, 2440892, 1913 ಸಂಪರ್ಕಿಸಬಹುದು. ತುರ್ತು ನಿರ್ವಹಣಾ ತಂಡಗಳು, ಕೃಷ್ಣರಾಜ ಕ್ಷೇತ್ರ- 2418816, 2431112, ಚಾಮರಾಜ ಕ್ಷೇತ್ರ- 2418800, ನರಸಿಂಹರಾಜ ಕ್ಷೇತ್ರ- 2418823 ಸಂಪರ್ಕಿಸಬಹುದು.