ಬೆಳೆ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ಬೈಲುಕುಪ್ಪೆ ಜೂ. 19
ಸರ್ಕಾರಿ ರಸ್ತೆಯನ್ನು ಬೇಸಿಗೆ ಕಾಲದಲ್ಲಿ ತೆರವುಗೊಳಿಸಿ ರಸ್ತೆ ಮಾಡಿಸದ ತಹಸೀಲ್ದಾರ್ ಮತ್ತು ಸರ್ವೇಯರ್ಗಳು ಬೆಳೆ ಬರುವ ವೇಳೆ ರಸ್ತೆ ಮಾಡಿಸುತ್ತಿರುವುದರಿಂದ ಬೆಳೆ ನಷ್ಟವಾಗಿದೆ. ಆದ್ದರಿಂದ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರೈತರು ಮತ್ತು ಬೈಲಕುಪ್ಪೆ ಗ್ರಾಮಸ್ಥರು ಬುಧವಾರ ಪ್ರತಿಭಟಿಸಿದರು.
ಬೈಲಕುಪ್ಪೆ ಗ್ರಾಪಂ ಅಧ್ಯಕ್ಷ ರವಿ ಮಾನು ಮಾತನಾಡಿ, ಸರ್ವೆ ನಂ. 54ರಲ್ಲಿ ಈಗಾಗಲೇ ಜೋಳ ಬಿತ್ತನೆ ಮಾಡಿದ್ದು, ಈ ಜಾಗದಲ್ಲಿ ತಹಸೀಲ್ದಾರ್ ಮತ್ತು ಸರ್ವೇಯರ್ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಅವರಿಗೆ ಮಣಿದು ಅರ್ಧದಿಂದ ರಸ್ತೆ ನಿರ್ಮಣ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ಈ ರಸ್ತೆ ಹಳೆ ಬೈಲಕುಪ್ಪೆಯಿಂದ 1ನೇ ಕ್ಯಾಂಪಿನವರೆಗೆ ಅನಾದಿ ಕಾಲದಿಂದ 3 ಕಿ.ಮೀ. ಕಾಲುದಾರಿ ಇದೆ. ಬೇಸಿಗೆಯಲ್ಲಿ ತೆರವುಗೊಳಿಸಿ ರಸ್ತೆ ಮಾಡದೆ, ಬೆಳೆ ಮಾಡಿದ ಮೇಲೆ ರೈತರಿಗೆ ತೊಂದರೆಕೊಟ್ಟು ರಸ್ತೆ ಮಾಡುತ್ತಿರುವುದು ಅಧಿಕಾರಿಗಳ ರೈತ ವಿರೋಧಿ ನೀತಿ ತೋರಿಸುತ್ತದೆ ಎಂದರು. ನಿಸಾರ್ ಅಹಮದ್, ನಾಗರಾಜಶೆಟ್ಟಿ, ಮುಖಂಡರಾದ ರಫೀಕ್ ಅಹಮದ್, ರಾಘವ, ಕಿರಣ್, ಮಂಜು, ರಾಮೇಗೌಡ, ಬಸವೇಗೌಡ, ವಿಜಿ, ಬಾಬು, ಮೋಹನ್, ಬಸವಣ್ಣ, ನಂಜುಂಡ, ಮಂಜುನಾಥ್ ಇದ್ದರು.