ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಹಜ ಕೃಷಿಯಲ್ಲಿ ಮೂರ್ತಿ ಕೈಲಾಸ ದರ್ಶನ

Mainashree
Updated On : 20 Jun 2013, 12:08 pm

ಕ.ಪ್ರ.ವಾರ್ತೆ  ಮೈಸೂರು  ಜೂ. 19
ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿಯ ಪ್ರಗತಿಪರ ರೈತ ಕೈಲಾಸಮೂರ್ತಿ ಸಹಜ ಕೃಷಿ, ಸಮೃದ್ಧ ಬೆಳೆಯಲ್ಲಿ ಸಂತೃಪ್ತಿ ಕಾಣುತ್ತಿದ್ದಾರೆ.
ಕೈಲಾಸಮೂರ್ತಿ ಅವರು ವಿಜಯಾ ಬ್ಯಾಂಕ್ ನೌಕರಿಯಲ್ಲಿದ್ದವರು. ಅತ್ಯುತ್ತಮ ಕ್ರೀಡಾಪಟುವೂ ಹೌದು. ಬ್ಯಾಂಕಿನಲ್ಲಿ ಕೂಡುವುದು-ಕಳೆಯುವುದು, ಗುಣಿಸುವುದು, ಭಾಗಿಸುವುದು ಬೇಜಾರಾಯಿತು. ಇದರಿಂದ ನೌಕರಿಯನ್ನು ಬಿಟ್ಟು ಕಳೆದ 23 ವರ್ಷಗಳಿಂದಲೂ ಕೃಷಿಯಲ್ಲಿ ನಿರತರಾಗಿದ್ದಾರೆ.
ದೊಡ್ಡಿಂದುವಾಡಿಯಲ್ಲಿ ಅವರಿಗೆ 10 ಎಕರೆ ಜಮೀನಿದೆ. ಮೂರು ವರ್ಷಗಳ ಹಿಂದಿನವರೆಗೆ ಇದ್ದ ಜಮೀನು 6.35 ಎಕರೆ. ಅಲ್ಲಿ ಅಡಕೆ, ಬಾಳೆ, ಮಾವು, ಪಪ್ಪಾಯ, ಸಪೋಟ, ಸೀತಾಫಲ, ನುಗ್ಗೆ- ಹೀಗೆ ವೈವಿಧ್ಯಮಯ ಬೆಳೆಗಳನ್ನು ಬೆಳೆದಿದ್ದಾರೆ. ಇವರು ಜಮೀನನ್ನು ಉಳುಮೆ ಮಾಡುವುದಿಲ್ಲ, ಕಳೆ ಕೀಳುವುದಿಲ್ಲ. ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಮತ್ತು ಕೀಟನಾಶಕ ಯಾವುದನ್ನು ಸಿಂಪಡಿಸುವುದಿಲ್ಲ. ಶೇ.100 ರಷ್ಟು ರಾಸಾಯನಿಕ ಮುಕ್ತ.
ಕಾಡಿನ ಮರಗಳ ಉದಾಹರಣೆ: ಕಾಡಿನಲ್ಲಿ ಸಹಸ್ರಾರು ಮರಗಳು ಬೆಳೆಯುತ್ತವೆ. ಅವುಗಳಿಗೆ ಯಾರಾದರೂ ಗೊಬ್ಬರ, ನೀರು ಹಾಕುತ್ತಾರಾ? ಅವುಗಳಿಗೆ ಯಾವುದಾದರೂ ರೋಗ ಬರುತ್ತದೆಯೇ ಎಂದು ಪ್ರಶ್ನಿಸುವ ಅವರು, ಅದೇ ರೀತಿ ನಾನು ಕೂಡ ನೈಸರ್ಗಿಕ ಕೃಷಿ ಮಾಡುತ್ತಿದ್ದೇನೆ. ಸೂರ್ಯಕಿರಣ, ಕಡಿಮೆ ನೀರು ಎಂಬುದು ನಾನು ಅನುಸರಿಸುತ್ತಿರುವ ತತ್ವ.
ಹೆಚ್ಚಿನ ದರವಿಲ್ಲ: ನನಗೆ ಯಾವುದೇ ಖರ್ಚಿಲ್ಲದೇ ಕೃಷಿಯಿಂದ ಲಾಭ ಬರುತ್ತಿದೆ. ನಾನು ನೈಸರ್ಗಿಕ ಕೃಷಿಯ ಹೆಸರಿನಲ್ಲಿ ಉತ್ಪನ್ನಗಳಿಗೆ ಗ್ರಾಹಕರಿಂದ ಒಂದಕ್ಕೆರಡು ದರ ವಸೂಲಿ ಮಾಡುವುದಿಲ್ಲ. ರಾಸಾಯನಿಕ ಗೊಬ್ಬರ ಹಾಕಿ ಬೆಳೆಯುವ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಇರುವ ದರ ಅಥವಾ ಅದಕ್ಕಿಂತ ಕಡಿಮೆಗೆ ನೀಡುತ್ತಿದ್ದೇನೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿದರೆ ಗ್ರಾಹಕರ ಸ್ನೇಹಿಯಾಗಿ ಕಾರ್ಯ ನಿರ್ವಹಿಸಬಹುದು.
ಎಲ್ಲಾ ರೈತರೂ ಭೂಮಿಯನ್ನು ನಂಬಿ, ಸರಿಯಾಗಿ ಕೃಷಿ ಮಾಡಿದರೆ ನಷ್ಟವಾಗುವ ಮಾತೇ ಇಲ್ಲ. ನಾವು ಸರಿಯಾಗಿ ಕೃಷಿ ಮಾಡಬೇಕು. ಜೀವವೈವಿಧ್ಯತೆ ಸಂರಕ್ಷಿಸಬೇಕು ಎನ್ನುತ್ತಾರೆ.
ಶಾಲಾ ಮಕ್ಕಳಿಗೆ ಹಣ್ಣು ಉಚಿತ: ಮೈಸೂರಿನ ಕುಕ್ಕರಹಳ್ಳಿ ಕೆರೆ ಬಳಿ ಬೆಳಗ್ಗೆ ವಾಯುವಿಹಾರಕ್ಕೆ ಬರುವವರು ಕೈಲಾಸಮೂರ್ತಿ ಅವರ ತೋಟದ ಪಪ್ಪಾಯ ಹಣ್ಣಿನ ರುಚಿ ಸವಿಯುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಶಾಲಾ ಮಕ್ಕಳಿಗಂತೂ ಇವರ ತೋಟದಲ್ಲಿ ಮಾವಿನ ಹಣ್ಣು ಉಚಿತ. ಜತೆಗೆ ಸಾವಯವ ಕೃಷಿ, ಪರಿಸರ ಸಂರಕ್ಷಣೆ ಕುರಿತ ಪಾಠ ಕೇಳಬೇಕು.
ಪ್ರಶಸ್ತಿ ಮಾಲೆ: ಕೈಲಾಸಮೂರ್ತಿ ಅವರಿಗೆ ಜೈವಿಕ ಸಂರಕ್ಷಣಾ ಪ್ರಶಸ್ತಿ. ರಾಷ್ಟ್ರೀಯ ಉದ್ಯೋಗ ರತ್ನ ಪ್ರಶಸ್ತಿ, ರಾಜ್ಯ ಸರ್ಕಾರದ ಪರಿಸರ ಪ್ರಶಸ್ತಿ ಕೂಡ ಸಂದಿದೆ.
ಇಂಟರ್ ನ್ಯಾಷನಲ್ ಬಯೋ ಡೈವರ್ಸಿಟಿ ಫ್ಲಾಟ್ಫಾರಂ, ಭಾರತೀಯ ಕೃಷಿ ಅನುಸಂಧಾನ- ಐಸಿಎಆರ್, ಬೆಂಗಳೂರು ಕೃಷಿ ವಿವಿಯ ಅರಣ್ಯ ವಿಭಾಗ, ಭಾರತೀಯ ತೋಟಗಾರಿಕೆ ಸಂಸ್ಥೆ, ಮೈಸೂರು ವಿವಿಯ ಇಎಂಎಂಆರ್ಸಿ, ಬೆಂಗಳೂರು ವಿವಿಯ ಕೃಷಿ ವಿಭಾಗ ಇವರ ಕಾರ್ಯಕ್ಕೆ ಸಹಯೋಗ ನೀಡುತ್ತಿವೆ.

  ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement