24ರಂದು ಬೆಟ್ಟದಪುರದ ಮಠದಲ್ಲಿ ಗಣಾರಾಧನಾ
ಪಿರಿಯಾಪಟ್ಟಣ: ತಾಲೂಕಿನ ಬೆಟ್ಟದಪುರ ಗ್ರಾಮದ ಸ್ವತಂತ್ರ ಸಲೀಲಾಖ್ಯ ವಿರಕ್ತ ಮಠದಲ್ಲಿ ಜೂ.24 ರಂದು ಬೆಳಗ್ಗೆ 10.30ಕ್ಕೆ ಚಿಕ್ಕವೀರದೇಶಿಕೇಂದ್ರ ಸ್ವಾಮೀಜಿಗಳ 85ನೇ ವರ್ಷದ ಹಾಗೂ ಚನ್ನವೀರದೇಶಿಕೇಂದ್ರ ಸ್ವಾಮಿಗಳ 32ನೇ ವರ್ಷದ ಗಣಾರಾಧನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಸಿ.ಸಿ. ಸದಾಶಿವಪ್ಪ ಹೇಳಿದರು.
ಮಠದ ಆವರಣದಲ್ಲಿರುವ ಸಿದ್ದಲಿಂಗೇಶ್ವರ ಗದ್ದಿಗೆ ನವೀಕರಣ ಪ್ರಾರಂಭೋತ್ಸವ, ಪೂಜ್ಯದ್ವಯರಿಗೆ ನುಡಿ ನೈವೇದ್ಯ, ಸಮಾಜದ ಯುವ ಚೇತನ ಶ್ರೀಗಳು, ಹಿರಿಯ ಹಾಗೂ ಕಿರಿಯ ಸಾಧಕರಿಗೆ ಅಭಿನಂದನೆ, ಎಸ್ಸಿವಿಡಿಎಸ್ ವಿದ್ಯಾಸಂಸ್ಥೆಗಳ 22ನೇ ವರ್ಷಾಚರಣೆ, ಕನ್ನಡ ಮಠದ ಪರವಾದ ಸುಪ್ರೀಂ ಕೋರ್ಟ್ ಆದೇಶ ಹಾಗೂ ಕನ್ನಡ ಮಠದ ಸ್ಥಾಪನೆ 204ನೇ ವರ್ಷಾಚರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರಿನ ವಿಭೂತಿಪುರ ಸಂಸ್ಥಾನದ ಮಹಾಂತಲಿಂಗ ಶಿವಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ಎಚ್.ಪಿ. ನಾಗೇಂದ್ರಪ್ರಸಾದ್ ಕಾರ್ಯಕ್ರಮ ಉದ್ಘಾಟಿಸುವರು. ಬೆಟ್ಟದಪುರ ಮಠದ ಚನ್ನಬಸವದೇಶಿಕೇಂದ್ರ ಸ್ವಾಮೀಜಿ, ಗುಂಡ್ಲುಪೇಟೆ ಪಡಗೂರು ಅಡವಿಮಠದ ಶಿವಲಿಂಗೇಂದ್ರ ಸ್ವಾಮೀಜಿ, ಅಣ್ಣಿಗೆರೆ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ, ಕಬ್ಬಹಳ್ಳಿ ಜಂಗಮಮಠದ ಚನ್ನಬಸವ ಸ್ವಾಮೀಜಿ, ತುಮಕೂರು ಮೇದಿನಿ ಮಠದ ವಿದ್ವಾನ್ ಶಿವಲಿಂಗ ಸ್ವಾಮೀಜಿ ಭಾಗವಹಿಸುವರು. ಸಾರ್ವಜನಿಕರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿಸುವಂತೆ ಮನವಿ ಮಾಡಿದರು.
ಮಾಜಿ ಶಾಸಕ ಎಚ್.ಸಿ. ಬಸವರಾಜು, ಮುಖಂಡರಾದ ಪಿ.ಎಂ. ಶಾಂತಪ್ಪ, ಪಾಲಾಕ್ಷ, ಕುಮಾರಸ್ವಾಮಿ, ಮಹೇಶ್, ನಂಜುಂಡಸ್ವಾಮಿ ಇದ್ದರು.