41 ದೂರು ಬಾಕಿ ಇತ್ಯರ್ಥಗೊಳಿಸಲು ಡಿಸಿ ಮನವಿ
ಮೈಸೂರು: ಈ ಹಿಂದಿನ ಫೋನ್ ಇನ್ ಕಾರ್ಯಕ್ರಮಕ್ಕೆ ಬಂದ 41 ದೂರುಗಳನ್ನು ವಿವಿಧ ಇಲಾಖೆಯವರು 30 ದಿನ ಕಳೆದಿದ್ದರೂ ಇತ್ಯರ್ಥಗೊಳಿಸಿಲ್ಲ. ಈ ವಿಚಾರವು ಗುರುವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಪ್ರಸ್ತಾಪವಾಯಿತು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ದೂರುಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕಿದ್ದ ಜಿಲ್ಲಾಧಿಕಾರಿ ಡಾ. ರಾಮೇಗೌಡ ಅವರು, ಏನಾದರೂ ಮಾಡಿ ದೂರು ಇತ್ಯರ್ಥಗೊಳಿಸುವಂತೆ ಮನವಿ ಮಾಡಿದರು.ಜಿಪಂ ಸಿಇಒ- 18, ಹುಣಸೂರು ತಹಸೀಲ್ದಾರ್- 4, ಮೈಸೂರು ತಹಸೀಲ್ದಾರ್- 4, ನಗರ ಪೊಲೀಸ್ ಆಯುಕ್ತ- 4, ಎಸ್ಪಿ- 7 ಬಾಕಿ ಉಳಿದಿದೆ.
ಅಮಾನತುಗೊಳಿಸಿ: ದೂರೊಂದಕ್ಕೆ ಸಂಬಂಧಿಸಿದಂತೆ ಇಬ್ಬರು ಶಿಕ್ಷಕರು ಮೇಲಾಧಿಕಾರಿಗಳ ವಿರುದ್ಧ ದೂರು ಸಲ್ಲಿಸುವುದನ್ನೇ ವೃತ್ತಿ ಮಾಡಿಕೊಂಡಿದ್ದಾರೆ. ಸರಿಯಾಗಿ ಶಾಲೆಗೆ ಹೋಗುವುದಿಲ್ಲ ಎಂದು ಡಿಡಿಪಿಐ ಬಿ.ಕೆ. ಬಸವರಾಜು ತಿಳಿಸಿದರು. ಸಂಬಂಧಪಟ್ಟ ಶಾಲೆಯ ದಾಖಲಾತಿಗಳನ್ನು ಪರಿಶೀಲಿಸಿ, ಆ ಶಿಕ್ಷಕರನ್ನು ಅಮಾನತುಗೊಳಿಸಿ, ವಿಚಾರಣೆ ನಡೆಸುವಂತೆ ಡಿಸಿ ಸೂಚಿಸಿದರು.