ಕಟ್ಟಡ ಕಿರಿದು, ಸಮಸ್ಯೆ ಹಿರಿದು
ಕ.ಪ್ರ.ವಾರ್ತೆ ಮೈಸೂರು ಜೂ. 20
ಬರ್ರೋ ಎನ್ನುವ ವಾಹನಗಳ ಆರ್ಭಟ, ಗಾಳಿಯೊಂದಿಗೆ ದಾಳಿ ನಡೆಸುವ ಧೂಳು, ಮಬ್ಬುಗತ್ತಲ ಓದು...
- ಇವಿಷ್ಟು ಟಿ. ನರಸೀಪುರ ತಾಲೂಕಿನ ವಾಣಿಜ್ಯ ಕೇಂದ್ರವಾದ ಬನ್ನೂರು ಗ್ರಂಥಾಲಯದ ಸ್ಥಿತಿ. ಜಿಲ್ಲೆಯ ಶಾಖಾ ಗ್ರಂಥಾಲಯಗಳ ಸಾಲಿಗೆ ಸೇರಿರುವ ಬನ್ನೂರು ಗ್ರಂಥಾಲಯ ಇರುವುದು ಅಲ್ಲಿನ ಮುಖ್ಯ ರಸ್ತೆಯಲ್ಲಿ. ಆದ್ದರಿಂದ ಈ ಗ್ರಂಥಾಲಯಕ್ಕೆ ವಾಹನಗಳ ಆರ್ಭಟ ಮತ್ತು ಧೂಳಿನ ದಾಳಿ ತಪ್ಪಿದ್ದಲ್ಲ.
ತೀರಾ ಕಿರಿದಾದ ಮತ್ತು ಹಳೆಯದಾದ ಈ ಕಟ್ಟಡ ಗಬ್ಬೆದ್ದು ನಾರುತ್ತಿದೆ. ಯಾವಾಗ ಕುಸಿದು ಬೀಳುವುದೋ ಎಂಬ ಆತಂಕ ಸಾರ್ವಜನಿಕರಲ್ಲಿದೆ. ತಾಪಂ ಕಚೇರಿಗೆ ಸೇರಿದ ಈ ಕಟ್ಟಡವನ್ನು ಗ್ರಂಥಾಲಯ ಇಲಾಖೆಗೆ ಬಾಡಿಗೆ ರಹಿತವಾಗಿ ನೀಡಲಾಗಿದೆ. ಟಿ.ನರಸೀಪುರ ತಾಪಂಗೆ ಬಾಡಿಗೆ ನೀಡುವಂತಿಲ್ಲ ಎಂಬ ಸಮಾಧಾನ ಬಿಟ್ಟರೆ, ಅಲ್ಲಿ ಉಳಿದಿದ್ದೆಲ್ಲವೂ ಅವ್ಯವಸ್ಥೆಯೇ.
ವಿದ್ಯುತ್ ಸಮಸ್ಯೆ: ಈ ಕಟ್ಟಡ ವಿದ್ಯುತ್ ಕಂಡು ಎಷ್ಟೋ ದಿನವಾಗಿದೆ. ಮಬ್ಬುಗತ್ತಲಿನಲ್ಲಿ ಗ್ರಂಥಾಲಯ ನಡೆಯುತ್ತಿದೆ. ಇತರ ಗ್ರಂಥಾಲಯದಂತೆ ಈ ಗ್ರಂಥಾಲಯ ರಾತ್ರಿ 8 ರವರೆಗೆ ತೆರೆಯದೆ, ಸಂಜೆ 6.30 ರವರೆಗೆ ಮಾತ್ರ ತೆರೆದಿರುತ್ತದೆ. ಇದಕ್ಕೆ ವಿದ್ಯುತ್ ಸಮಸ್ಯೆಯೇ ಪ್ರಮುಖ ಕಾರಣ. ಇನ್ನು ಇಲ್ಲಿ ಶೌಚಾಲಯ ವ್ಯವಸ್ಥೆಯಂತೂ ಕೇಳುವಂತಿಲ್ಲ. ಗ್ರಂಥಾಲಯ ಕಟ್ಟಡ ಮುಂದೆಯೇ ವಾಹನಗಳು ಆರ್ಭಟಿಸಿ ತಿರುಗಾಡುವುದರಿಂದ ಓದುಗರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಅಲ್ಲದೆ ಧೂಳು ವಿಪರೀತವಾಗಿದೆ.
ಗ್ರಂಥಾಲಯ ಕಿರಿದಾಗಿರುವುದರಿಂದ ಹೆಚ್ಚು ಪುಸ್ತಕ ಸಂಗ್ರಹಣೆ ಸಹ ಸಾಧ್ಯವಾಗುತ್ತಿಲ್ಲ. ಕಡಿಮೆ ಸಂಖ್ಯೆ ಪುಸ್ತಕ ಇಲ್ಲಿದೆ. ಕೇವಲ ಮೂರು ರ್ಯಾಕ್ಗಳಲ್ಲಿ ಪುಸ್ತಕ ಸಂಗ್ರಹಿಸಲಾಗಿದೆ. ಮಳೆ ಬಿದ್ದರೆ ನೀರು ಸೋರುವುದರಿಂದ ಪುಸ್ತಕವನ್ನು ಕಾಪಾಡುವುದು ದುಸ್ತರವಾಗಿದೆ. ಸಾರ್ವಜನಿಕರ ಅನುಕೂಲಕ್ಕೆ ಹೆಚ್ಚು ಟೇಬಲ್ ಅಥವಾ ಕುರ್ಚಿ ಹಾಕಲೂ ಇಲ್ಲಿ ಕಷ್ಟ.
ಈ ಹಿಂದೆ ಪುರಸಭೆಗೆ ಸೇರಿದ ಲಿಂಗೇಗೌಡ ಶಿಶುವಿಹಾರ ಕಟ್ಟಡದಲ್ಲಿ ಒಂದು ಕಾಲಕ್ಕೆ ಶಿಶುವಿಹಾರ ಮತ್ತು ಗ್ರಂಥಾಲಯ ಎರಡೂ ನಡೆಯುತಿತ್ತು. ಆದರೆ ಶಿಶುವಿಹಾರ ನಿಂತು ಹೋದ ಬಳಿಕ ಗ್ರಂಥಾಲಯ ಮಾತ್ರ ಇತ್ತು.
ಈ ಕಟ್ಟಡ ಬೀಳುವ ಸ್ಥಿತಿಯಲ್ಲಿರುವುದರಿಂದ ಅದನ್ನು ಮೂರ್ನಾಲ್ಕು ವರ್ಷಗಳ ಹಿಂದೆ ತಾಪಂಗೆ ಸೇರಿದ (ಈ ಹಿಂದೆ ಅತಿಥಿ ಗೃಹವಾಗಿದ್ದ) ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಬಳಿಕ ಪುರಸಭೆಗೆ ಮತ್ತು ತಾಪಂಗೆ ನಿವೇಶನ ನೀಡುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ತಾಪಂ ಅಧಿಕಾರಿಗಳು ಬನ್ನೂರು ಪುರಸಭೆಯಿಂದಲೆ ನಿವೇಶನ ಪಡೆಯುವಂತೆ ಹೇಳಿದ್ದಾರೆ.
ಆದರೆ ಪುರಸಭೆಗೆ ಸೇರಿದ ಈ ಹಿಂದಿನ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸುವ ಉದ್ದೇಶ ಸಹ ಇತ್ತು.
ಆದರೆ ಈ ಕಟ್ಟಡ ಮಾರುಕಟ್ಟೆಗೆ ಹತ್ತಿರ ಇರುವುದರಿಂದ ಅದು ಸೂಕ್ತ ಸ್ಥಳವಲ್ಲ ಎಂಬ ತೀರ್ಮಾನಕ್ಕೆ ಬಂದ ಹಿನ್ನೆಲೆಯಲ್ಲಿ
ಬಸ್ ನಿಲ್ದಾಣದ ಬಳಿ ನಿವೇಶನ ನೀಡುವುದಾಗಿ ಪುರಸಭೆ ಅಧಿಕಾರಿಗಳು ಭರವಸೆ ನೀಡಿ ವರ್ಷವಾಗಿದೆ. ನಿವೇಶನ ದೊರಕಿದ ಕೂಡಲೇ ಗ್ರಂಥಾಲಯ ನಿರ್ಮಾಣ ಸಾಧ್ಯವಾಗಬಹುದು.
ಬನ್ನೂರು ಪುರಸಭೆಯಿಂದ ಸುಮಾರು 1.5 ಲಕ್ಷ ಗ್ರಂಥಾಲಯ ಸೆಸ್ ಬಾಕಿ ಬರಬೇಕಿದೆ. ಇಲ್ಲಿ 800 ಮಂದಿ ಸದಸ್ಯರಿದ್ದು, 7 ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ.
ಡಿ.ಎನ್. ಮಹೇಂದ್ರ