ನನ್ನ ಸಂಪಾದನೆ ಬಗ್ಗೆ ಮಾತಾಡಲು ನಿಮಗೇನು ಹಕ್ಕಿದೆ?
ಕ.ಪ್ರ.ವಾರ್ತೆ ಕೆ.ಆರ್. ನಗರ ಜೂ. 20
ಚುನಾವಣೆಯಲ್ಲಿ ಖರ್ಚು ಮಾಡಿರುವುದು ನನ್ನ ಸ್ವಂತ ದುಡಿಮೆ ಹಣ, ಅಂಬಿಕಾ ಶುಗರ್ಸ್ನವರಿಂದ ಮತ್ತು ನಾಲಾ ಆಧುನಿಕರಣ ಕಾಮಗಾರಿಯ ಗುತ್ತಿಗೆದಾರರಿಂದ ನಾನು ಹಣ ಪಡೆದಿಲ್ಲ, ಆತ್ಮಸಾಕ್ಷಿ ಇದ್ದರೆ ಶಾಸಕ ಸಾ.ರಾ. ಮಹೇಶ್ ಅವರೆ ಕಪ್ಪಡಿಗೆ ಹೋಗಿ ಆಣೆ ಮಾಡಿಕೊಳ್ಳಲಿ ಎಂದು ಸಂಸದ ಎಚ್. ವಿಶ್ವನಾಥ್ ಹೇಳಿದರು.
ಮಾತೆತ್ತಿದರೆ ಪ್ರಾಮಾಣಿಕತೆ ಮತ್ತು ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡುವ ಶಾಸಕರು, ತಾಲೂಕಿನ ಜನತೆಗೆ ಅಕ್ಕಿ ಹಂಚಿ ಅವರನ್ನು ಭಿಕ್ಷುಕರಂತೆ ಕಾಣಲು, ಸೀರೆ ಹಂಚಲು, ಚುನಾವಣೆಯಲ್ಲಿ ಹೆಂಡ ಕುಡಿಸಲು ಹಣ ಎಲ್ಲಿಂದ ಬಂತು ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ನನ್ನ ಅಭಿವೃದ್ಧಿ ಕಾರ್ಯ ನೋಡಿ ಮತದಾರರು ಚುನಾಯಿಸಿದ್ದಾರೆ ಎಂದು ಶಾಸಕರು ಹೇಳುತ್ತಿದ್ದಾರೆ. ಎಸ್. ನಂಜಪ್ಪನವರು ಮತ್ತು ನಾನು ತಾಲೂಕಿನ ಅಭಿವೃದ್ಧಿಯನ್ನೇ ಮಾಡಿಲ್ಲವೆ, ಎಲ್ಲ ಅಭಿವೃದ್ಧಿ ಕಾರ್ಯಗಳು ಇವರು ಬಂದಾಗಲೇ ಆಗಿವೆಯೆ ಎಂದ ಅವರು, ನಿಮ್ಮೂರಿಗೆ ಕಾವೇರಿ ನದಿಯಿಂದ ಕುಡಿಯುವ ನೀರು ಕೊಡಿಸಿದ್ದು, ನಾಲೆಯ ಹೂಳೆತ್ತಿಸಿದ್ದು ಯಾರು ಎಂದು ಕೇಳಿದರು.
ಜನತೆಗೆ ಸತ್ಯ ಗೊತ್ತಿಲ್ಲವೇ?: ಸಾವಿರಾರು ಮಂದಿಯಿಂದ ಖಾಲಿ ಚೆಕ್ ಪಡೆದುಕೊಂಡು ಅವರಿಗೆ ಬೆದರಿಕೆ ಹಾಕಿ, ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘಗಳಿಗೆ ಹಣ ಹಂಚಿ, ಸೀರೆ ವಿತರಿಸಿ, ದುಡ್ಡು ಕೊಟ್ಟು ಮತ ಪಡೆದು ಗೆದ್ದಿರುವುದು ನಿಜವಾದ ಸತ್ಯ. ಇದನ್ನು ಮುಚ್ಚಿಟ್ಟು ನನ್ನ ಅಭಿವೃದ್ಧಿ ಕಾರ್ಯದಿಂದ ಗೆದ್ದಿದೇನೆ ಎಂದು ಹೇಳುತ್ತೀರಲ್ಲ, ತಾಲೂಕಿನ ಜನತೆಗೆ ಸತ್ಯ ಗೊತ್ತಿಲ್ಲವೆ ಎಂದು ಟೀಕಿಸಿದರು.
ನನ್ನ ಆಸ್ತಿ ಮತ್ತು ಸಂಪಾದನೆ ಬಗ್ಗೆ ಮಾತನಾಡಲು ನಿಮಗೆ ಯಾವ ಹಕ್ಕಿದೆ. ನಾನು ನನ್ನ ಸಮಸ್ತ ಆಸ್ತಿಯ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದೇನೆ. ನನ್ನ ಆದಾಯದ ಮೂಲ ಪ್ರಶ್ನಿಸುವ ನೀವು ಹುಟ್ಟಿನಿಂದಲು ಆಗರ್ಭ ಶ್ರೀಮಂತರೆ ಎಂದು ಜರಿದ ಸಂಸದರು, ನಮ್ಮ ಕುಟುಂಬದವರು ತಲೆಮಾರುಗಳಿಂದ ಭೂಮಾಲೀಕರಾಗಿದ್ದು, ನಮಗೂ ಸಂಪಾದನೆಯ ಮೂಲ ಇದೆ ಎಂದರಲ್ಲದೆ, ಸಿದ್ದಾಪುರದ ಬಳಿ 25 ಎಕರೆ ಜಮೀನನ್ನು ನಿಮ್ಮವರಿಂದಲೆ ಖರೀದಿಸಿದ್ದು ಎಂದು ಸಮಾಜಾಯಿಷಿ ನೀಡಿದರು.
ತಾಲೂಕಿನ ಅಭಿವೃದ್ಧಿಯ ಹರಿಕಾರ ನಾನೇ ಎಂದು ಹೇಳಿಕೊಂಡು ತಿರುಗುತ್ತಿರುವ ಶಾಸಕರ ವರ್ತನೆ ಮೂರ್ಖತನದ್ದು. ಯಾವುದೇ ಶಾಸಕರಾದರೂ ಅಭಿವೃದ್ಧಿ ಕೆಲಸ ಸಾಮಾನ್ಯ. ಅದು ಬಿಟ್ಟು ಎಲ್ಲವು ನನ್ನಿಂದಲೆ ಎಂಬುದು ಸರಿಯಲ್ಲ. ಜನಪರ ಕೆಲಸ ಮಾಡಿದರೆ ಮಾತ್ರ ನಿಮಗೆ ನಮ್ಮ ಬೆಂಬಲವಿದೆ. ದ್ವೇಷದ ರಾಜಕಾರಣ ಮಾಡಿದರೆ ನಾವು ವಿರೋಧಿಸಬೇಕಾಗುತ್ತದೆ ಎಂದು ತಿಳಿಸಿದರು.
ಶ್ರೀಮಂತಿಕೆ ಹೇಗೆ ಬಂತು?: ಮೈಸೂರು ವಸ್ತು ಪ್ರದರ್ಶನದ ರಸ್ತೆಯಲ್ಲಿ ನಿಂತಿದ್ದ ಸಾ.ರಾ. ಮಹೇಶ್ಗೆ ಇಷ್ಟೊಂದು ಶ್ರೀಮಂತಿಕೆ ಹೇಗೆ ಬಂತು. ಅದರ ಮೂಲವನ್ನು ನಾವು ಕೇಳಬೇಕಲ್ಲವೆ. ಇವರ ಭ್ರಷ್ಟಚಾರವನ್ನು ಸಮಾಜ ಪರಿವರ್ತನ ಸಂಸ್ಥೆಯ ಮುಖ್ಯಸ್ಥ ಎಸ್.ಆರ್. ಹಿರೇಮಠ್ ಅವರು ಬಹಿರಂಗಪಡಿಸಿದ್ದಾರೆ. ಇದರಲ್ಲಿ ನನ್ನ ಪಾತ್ರ ಇದೆ ಎಂಬುದು ಶುದ್ಧ ಸುಳ್ಳು ಎಂದು ಸ್ಪಷ್ಟಪಡಿಸಿದರು.
ನನಗೆ ರಾಜಕೀಯ ಜನ್ಮ ನೀಡಿದ ಕೆ.ಆರ್. ನಗರದ ಅಭಿವೃದ್ಧಿಗೆ ನಾನು ಸದಾ ಬದ್ಧನಾಗಿದ್ದು, ಹೊಸೂರು, ಕಲ್ಲಹಳ್ಳಿ, ಸೌತನಹಳ್ಳಿ, ಕೆಗ್ಗೆರೆ, ಸುತ್ತಮುತ್ತಲ ಗ್ರಾಮಗಳು ಮತ್ತು ಅಡಗೂರು, ಗಳಿಗೆಕೆರೆ, ಮಾರಗೌಡನಹಳ್ಳಿ ಕಂಚಿನಕೆರೆ, ಐಪನಹಳ್ಳಿ, ಗ್ರಾಮಗಳಿಗೆ ನದಿಮೂಲದಿಂದ ಕುಡಿಯುವ ನೀರಿನ ಯೋಜನೆಗೆ ಹಣ ಒದಗಿಸುವಂತೆ ಕೇಂದ್ರಕ್ಕೆ ಅನುಮೋದನೆಗೆ ಮನವಿ ಸಲ್ಲಿಸಿದ್ದು, ಶ್ರೀಘ್ರದಲ್ಲಿಯೇ ಮಂಜೂರಾತಿ ದೊರೆಯಲಿದೆ ಎಂದು ಮಾಹಿತಿ ನೀಡಿದರು.
ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿರುವವರು ಯಾರು ಎಂಬುದು ಶ್ರೀಘ್ರದಲ್ಲಿಯೇ ಬಹಿರಂಗವಾಗಲಿದೆ. ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಗೆದ್ದ ಮಾತ್ರಕ್ಕೆ ಏನೋ ಆಗಿದೆ ಎಂದು ಬೀಗುವುದು ಸರಿಯಲ್ಲ ಎಂದ ಸಂಸದರು, ನಾನು ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಗೆ ಮತ್ತು ನನ್ನ ಹಿಂಬಾಲಕರಿಗೆ ದೊಡ್ಡಸ್ವಾಮೇಗೌಡರಿಂದ ಹಣ ಕೊಡಿಸಿದ್ದೇನೆ ಎಂಬ ಶಾಸಕರ ಆರೋಪ ಸುಳ್ಳಿನ ಕಂತೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ದೊಡ್ಡಸ್ವಾಮೇಗೌಡ, ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್. ಚನ್ನಬಸಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಲ್. ರಾಜಶೇಖರ್, ಪುರಸಭಾ ಸದಸ್ಯರಾದ ಕೆ.ಪಿ. ಪ್ರಭುಶಂಕರ್, ರಿಜ್ವಾನ್ ಉಲ್ಲಾಖಾನ್ ಇದ್ದರು.