'ವಿಜ್ಞಾನವಿಲ್ಲದೆ ಅಭಿವೃದ್ಧಿ ಅಸಾಧ್ಯ'
ಕ.ಪ್ರ.ವಾರ್ತೆ ಮೈಸೂರು ಜೂ. 20
ವಿಜ್ಞಾನದ ಕೊಡುಗೆ ಇಲ್ಲದೆ ಹೋದರೆ ದೇಶದ ಅಭಿವೃದ್ಧಿ ಅಸಾಧ್ಯ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಹೇಳಿದರು.
ಮಂಗಳೂರಿನ ಎಂಟಿ ಶಿಕ್ಷಣ ಚಾರಿಟಬಲ್ ಟ್ರಸ್ಟ್ ಹಾಗೂ ಮೈಸೂರು ಶಿಕ್ಷಣ ಟ್ರಸ್ಟ್ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಹೇಶ್ ಪದವಿಪೂರ್ವ ಕಾಲೇಜು ಮೈಸೂರು ಸಂಸ್ಥೆಯ ವಿಜ್ಞಾನ ವಿಭಾಗ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಆರ್ಥಿಕತೆ ಸೇರಿದಂತೆ ಪ್ರತಿಯೊಂದು ಅಭಿವೃದ್ಧಿಗೆ ವಿಜ್ಞಾನದ ಕೊಡುಗೆ ಬಹುಮುಖ್ಯ ಪಾತ್ರ ವಹಿಸಲಿದೆ. ವಿಜ್ಞಾನ ಇಲ್ಲದೆ ಯಾವುದೇ ಪ್ರಗತಿ ಸಾಧ್ಯವಿಲ್ಲ. ಇಂದು ಭೌತಶಾಸ್ತ್ರ, ರಾಸಾಯನಶಾಸ್ತ್ರ, ಗಣಿತ ಹಾಗೂ ಜೀವರಸಾಯನಶಾಸ್ತ್ರ ಕುರಿತು ಜಾಗತಿಕ ಮಟ್ಟದಲ್ಲಿ ಬಹುದೊಡ್ಡ ಚರ್ಚೆಯಾಗುತ್ತಿರುವುದು ಮೂಲ ವಿಜ್ಞಾನದ ಮಹತ್ವಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ವಿಜ್ಞಾನಿಗಳ ಸಂಖ್ಯೆ ಹೆಚ್ಚಲಿ: ಇಂದು ದೇಶದಲ್ಲಿ ವಿಜ್ಞಾನಿಗಳ ಸಂಖ್ಯೆ ಹೆಚ್ಚಾಗಬೇಕು. ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಣ ತಜ್ಞರು ಯುವಜನತೆಯಲ್ಲಿ ಮೂಲ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಮಾಡಬೇಕು. ಪೋಷಕರು ಸಹ ತಮ್ಮ ಮಕ್ಕಳನ್ನು ವಿಜ್ಞಾನಿಗಳನ್ನಾಗಿಸುವಲ್ಲಿ ಕಾಳಜಿ ವಹಿಸಬೇಕು. ಕಳೆದ 10 ವರ್ಷಗಳಲ್ಲಿ ಮಾಹಿತಿ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಈ ಸೌಲಭ್ಯ ಬಳಸಿಕೊಂಡು ವಿದ್ಯಾರ್ಥಿಗಳು ವಿಜ್ಞಾನಿಗಳಾಗುವತ್ತ ಮುನ್ನಡೆಯಬೇಕು ಎಂದು ಆಶಿಸಿದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಎಂ. ಪುಟ್ಟು ಮಾತನಾಡಿ, ಇಂದು ಮನೆಯಲ್ಲಿಯೇ ಕುಳಿತು ವಿಶ್ವದ ವಿದ್ಯಮಾನಗಳನ್ನು ಕಾಣುವಂಥ ಕೊಡುಗೆಯನ್ನು ವಿಜ್ಞಾನ ನೀಡಿದೆ. ಪ್ರಕೃತಿಗೆ ಯಾವುದೇ ಅಪಾಯ ಒದಗದ ಹಾಗೇ ಸಂಶೋಧನೆಗಳು ಹಾಗೂ ಆವಿಷ್ಕಾರಗಳನ್ನು ನಡೆಸಿ ದೇಶದ ಅಭಿವೃದ್ಧಿಗೆ ಯುವಜನತೆ ಮುಂದಾಗಬೇಕು ಎಂದರು.
ಎಂಟಿ ಎಡ್ಯೂಕೇರ್ ಸಿಎಂಡಿ ಮಹೇಶ್ ಆರ್. ಶೆಟ್ಟಿ ಹಾಗೂ ಮೈಸೂರು ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಅಶರಫ್ ಪೀರನ್ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಶಿಕ್ಷಣ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿಗಳಾದ ಎ.ಎಸ್. ಗೋಪಾಲಕೃಷ್ಣ, ಸುಜೀತ್ ಕೊಯಾಟ್, ಮುರಳಿ ಅಯ್ಯರ್ ಇದ್ದರು. ಎಚ್. ಗೋಪಿನಾಥ್ ಸ್ವಾಗತಿಸಿದರು.