'ಸಹಕಾರ ಕ್ಷೇತ್ರ ಸುಧಾರಣೆಗೆ ಕಾರ್ಯಕ್ರಮ'
ಕ.ಪ್ರ.ವಾರ್ತೆ ಮೈಸೂರು ಜೂ. 20
ಜು. 12 ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಕಾರ ಕ್ಷೇತ್ರ ಸುಧಾರಣೆಗೆ ಸಂಬಂಧಿಸಿದ ಹಲವು ಪ್ರಸ್ತಾವನೆಗಳನ್ನು ಪ್ರಕಟಿಸಲಿದ್ದು, ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಹೇಳಿದರು.
ಮೈಸೂರಿನ ಅಗ್ರಹಾರದಲ್ಲಿರುವ ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕಿನ 94ನೇ ಸಂಸ್ಥಾಪನಾ ವರ್ಷದ ಅಂಗವಾಗಿ ಸ್ಥಾಪಕ ಶೆಟ್ಟಪ್ಪ ಸಿದ್ದಪ್ಪ ಅವರ ಪ್ರತಿಮೆಗೆ ಬುಧವಾರ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಹಲವು ಯೋಜನೆಗಳನ್ನು ಪ್ರಕಟಿಸಲಾಗುವುದು. ಬಡ್ಡಿರಹಿತವಾದ ಸಾಲದ ಮೊತ್ತವನ್ನು 1 ಲಕ್ಷ ರು.ನಿಂದ 2 ಲಕ್ಷ ರು.ಗೆ ಹೆಚ್ಚಿಸಲು ಚಿಂತಿಸಲಾಗಿದೆ ಎಂದರು.
ಯಶಸ್ವಿನಿ ಯೋಜನೆಯನ್ನು ಎಸ್ಸಿ, ಎಸ್ಟಿಗಳು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇದರ ಸಾಧನೆ ಶೇ. 1 ರಷ್ಟನ್ನು ದಾಟಿಲ್ಲ. ಕಳೆದ ಬಿಜೆಪಿ ಸರ್ಕಾರ ರೈತರ 25 ಸಾವಿರ ಸಾಲ ಮನ್ನಾ ನಿರ್ಧಾರವನ್ನು ಏಕಾಏಕಿ ಪ್ರಕಟಿಸಿದ್ದರಿಂದ ಗೊಂದಲ ಸೃಷ್ಟಿಯಾಗಿದೆ. ಆವರ್ತ ನಿಧಿ ಮುಖಾಂತರ ಹಣ ಒದಗಿಸಿದ್ದರೆ ರೈತರಿಗೆ ಕಷ್ಟ ಎದುರಾಗುತ್ತಿರಲಿಲ್ಲ. ಆದ್ದರಿಂದ ನಮ್ಮ ಸರ್ಕಾರ ಇನ್ನು ಮೂರು ತಿಂಗಳಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.
ಕೃಷ್ಣರಾಜೇಂದ್ರ ಬ್ಯಾಂಕ್ ಸಾಧನೆ: 1919 ರಲ್ಲಿ ಶೆಟ್ಟಪ್ಪ ಸಿದ್ದಪ್ಪ ಸ್ಥಾಪಿಸಿದ ಈ ಬ್ಯಾಂಕ್ 94ನೇ ವರ್ಷಕ್ಕೆ ಕಾಲಿಟ್ಟಿದೆ. ಇಲ್ಲಿಯವರೆಗೂ ಉತ್ತಮ ರೀತಿಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದು, 8385 ಷೇರುದಾರರು ಹಣ ಹೂಡಿದ್ದಾರೆ. ಸುಮಾರು 7 ಕೋಟಿ ರು. ಸ್ವಂತ ಬಂಡವಾಳ ಹೊಂದಿದೆ. ಪ್ರಸಕ್ತ ಸಾಲಿಗೆ 57 ಕೋಟಿ ರು. ದುಡಿಯುವ ಬಂಡವಾಳ ಹೊಂದಿದೆ. 49 ಕೋಟಿ ರು.ಗಳಷ್ಟು ಠೇವಣಿ ಹೊಂದಿದ್ದು ಬ್ಯಾಂಕು ಉತ್ತಮ ಸ್ಥಿತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಬ್ಯಾಂಕಿನ ಅಧ್ಯಕ್ಷ ಎಚ್. ವಾಸು, ಪದಾಧಿಕಾರಿಗಳಾದ ಪ್ರತಿಧ್ವನಿ ಪ್ರಸಾದ್, ನಂ. ಸಿದ್ದಪ್ಪ, ತಾಯೂರು ವಿಠಲ ಮೂರ್ತಿ ಇದ್ದರು.