ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸುದ್ದಿ ಸಂಕ್ಷೇಪ

Mainashree
Updated On : 20 Jun 2013, 11:48 am

ಹುದ್ದೆಗಳ ಪರೀಕ್ಷೆಗೆ ಉಚಿತ ತರಬೇತಿ
ಚಾಮರಾಜನಗರ: ಜನರಲ್ ಇನ್ಸೂರೆನ್ಸ್ ಕಂಪನಿ ಹಾಗೂ ಭಾರತೀಯ ರಿಸರ್ವ್ ಬ್ಯಾಂಕಿನ ಅಸಿಸ್ಟೆಂಟ್ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಜಿಲ್ಲೆಯ ಅಭ್ಯರ್ಥಿಗಳನ್ನು ಸಜ್ಜುಗೊಳಿಸಲು ನಗರದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವು ಉಚಿತ ಪರೀಕ್ಷಾ ಪೂರ್ವ ತರಬೇತಿ ಆಯೋಜಿಸಿದೆ. ಜೂ.24ರಿಂದ ಜುಲೈ 5ರವರೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದಲ್ಲಿ ಅಭ್ಯರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತದೆ. ಈಗಾಗಲೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಜೂನ್ 24ರಂದು ಮದ್ಯಾಹ್ನ 2 ಗಂಟೆಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರಕ್ಕೆ ತಪ್ಪದೆ ಹಾಜರಾಗುವಂತೆ ಜಿಲ್ಲಾ ಉದ್ಯೋಗಾಧಿಕಾರಿ ಸಿ.ಎಂ. ಉಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜು.25ಕ್ಕೆ ಕ್ರೀಡಾ ಪ್ರತಿನಿಧಿಗಳ ಸಭೆ
ಮೈಸೂರು: ಮೈಸೂರು ವಿವಿ 2013- 14ನೇ ಸಾಲಿನ ಕ್ರೀಡಾ ಕಾರ್ಯಕ್ರಮಗಳನ್ನು ರೂಪಿಸಲು ಸಂಯೋಜಿತ ಹಾಗೂ ನಿಯೋಜಕ ಕಾಲೇಜುಗಳ ಪ್ರತಿನಿಧಿಗಳ ವಾರ್ಷಿಕ ಸಭೆಯು ಜು.25ರ ಬೆಳಗ್ಗೆ 11ಕ್ಕೆ ಸ್ಪೋರ್ಟ್ಸ್ ಪೆವಿಲಿಯನ್ ಹೊಸ ಕಟ್ಟಡದ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ಕೃಷ್ಣ ತಿಳಿಸಿದ್ದಾರೆ. ಈ ಸಭೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ, ಕ್ರೀಡಾ ಕಾರ್ಯದರ್ಶಿಗಳು ಪಾಲ್ಗೊಳ್ಳಬೇಕು. ಪ್ರತಿನಿಧಿಗಳ ಪ್ರಯಾಣ ಹಾಗೂ ದಿನ ಭತ್ಯೆಗಳನ್ನು ಆಯಾ ಕಾಲೇಜಿನ ಕ್ರೀಡಾನಿಧಿಯಿಂದಲೇ ಪ್ರಾಂಶುಪಾಲರು ಭರಿಸಬೇಕು ಎಂದು ಅವರು ಹೇಳಿದ್ದಾರೆ. ಸಭೆಯಲ್ಲಿ ಮಂಡಿಸಲು ವಿವಿ ಕ್ರೀಡಾಪಟುಗಳಿಗೆ ಸಂಬಂಧಪಟ್ಟ ಸಲಹೆ, ಸೂಚನೆಗಳು ಇದ್ದಲ್ಲಿ ಜು.18 ರೊಳಗೆ ತಲುಪಿಸಬೇಕು. ಮಹಿಳೆಯರು, ಪುರುಷರ ಅಂತರ ವಲಯ ಕ್ರೀಡಾ ಸ್ಪರ್ಧೆಗಳು, ಅಥ್ಲೆಟಿಕ್ಸ್ ಕೂಟ ಮತ್ತು ಕ್ರಾಸ್‌ಕಂಟ್ರಿ ರೇಸ್‌ಗಳನ್ನು ನಡೆಸಲಿಚ್ಛಿಸುವ ಕಾಲೇಜಿನವರು ಜು.18 ರೊಳಗೆ ಪ್ರಸ್ತಾವನೆ ಕಳುಹಿಸಬೇಕು ಎಂದು ತಿಳಿಸಿದ್ದಾರೆ.
ಗಾಯಾಳು ಶಿಕ್ಷಕಿ ಸಾವು
ಮೈಸೂರು: ಗ್ಯಾಸ್ ಸೋರಿಕೆಯಿಂದ ಹೊತ್ತಿಕೊಂಡ ಬೆಂಕಿಯಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಬುಧವಾರ ರಾತ್ರಿ ಮೃತಪಟ್ಟಿದ್ದಾರೆ. ಮೈಸೂರಿನ ಕನಕದಾಸನಗರ ದಟ್ಟಗಳ್ಳಿ 3ನೇ ಹಂತ ನಿವಾಸಿ ಯದುನಾಥ್ ಎಂಬವರ ಪತ್ನಿ ಎಂ.ಆರ್. ಲಕ್ಷ್ಮಿ (38) ಮೃತಪಟ್ಟವರು. ಇವರು ಎಚ್.ಡಿ. ಕೋಟೆ ತಾಲೂಕು ಜಿ.ಬಿ. ಸರಗೂರಿನ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕಿ. ಇವರಿಗೆ 5 ವರ್ಷಗಳ ಹಿಂದೆ ಮದುವೆಯಾಗಿದ್ದು, 7 ತಿಂಗಳ ಗಂಡು ಮಗು ಇದೆ. ಏ.17 ರಂದು ನೀರು ಕಾಯಿಸುವ ಸಲುವಾಗಿ ಗ್ಯಾಸ್ ಸ್ಟೌವ್ ಹಚ್ಚಿದ್ದರು. ಈ ವೇಳೆ ಮಗು ಅಳಲು ಆರಂಭಿಸಿದ್ದರಿಂದ ಗ್ಯಾಸ್ ಆಫ್ ಮಾಡಿಲ್ಲ. ವಾಪಸ್ ಬಂದ ಲಕ್ಷ್ಮಿ ಅವರು ಸ್ಟೌವ್ ಹಚ್ಚಿದಾಗ ಬೆಂಕಿ ಹೊತ್ತಿಕೊಂಡಿದೆ. ತೀವ್ರವಾಗಿ ಗಾಯಗೊಂಡಿದ್ದ ಲಕ್ಷ್ಮಿ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಉದ್ಯೋಗ ಮೇಳ
ಮೈಸೂರು: ಸರಸ್ವತಿಪುರಂನಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಜೂ.26ರ ಬೆಳಗ್ಗೆ 10.30ಕ್ಕೆ ಉದ್ಯೋಗ ಮೇಳ ಏರ್ಪಡಿಸಲಾಗಿದೆ. ಎಂಪ್ಲಾಯ್‌ಮೆಂಟ್ ಪಾರ್ಕ್ ಯೋಜನೆಯಡಿ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಎಸ್ಸೆಸ್ಸೆಲ್ಸಿ ಉತ್ತೀರ್ಣ, ಅನುತ್ತೀರ್ಣ, ಪಿಯುಸಿ, ಬಿ.ಎ, ಬಿ.ಕಾಂ, ಬಿ.ಎಸ್ಸಿ, ಐಟಿಐ, ಡಿಪ್ಲೊಮಾ ಹಾಗೂ ಜೆಒಸಿ ಉತ್ತೀರ್ಣರಾದ ಪುರುಷರು, ಮಹಿಳೆಯರು ಈ ಮೇಳದಲ್ಲಿ ಭಾಗವಹಿಸಬಹುದು. ವಿವಿಧ ಕಂಪನಿಗಳ ನಿಯೋಜಕರಿಂದ 500 ಮಂದಿಗೆ ಹುದ್ದೆಗಳಿಗೆ ಸ್ಥಳದಲ್ಲೇ ಆಯ್ಕೆ ಹಾಗೂ ಆಯ್ಕೆ ಪತ್ರ ನೀಡಲಿವೆ. ಲೇಬರ್ ನೆಟ್ ಪ್ರೈ.ಲಿ. ವಿವಿಧ ಹುದ್ದೆಗಳಿಗೆ, ಹಿಂದೂಜಾ ಗ್ಲೋಬಲ್ ಸಲ್ಯೂಷನ್ ಕಸ್ಟಮರ್ ರಿಲೇಷನ್ ಆಫೀಸರ್ 150 ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಿದೆ. ಆಸಕ್ತರು ಸ್ವ ವಿವರದೊಂದಿಗೆ ಹಾಜರಾಗಬೇಕೆಂದು ಸಹಾಯಕ ನಿರ್ದೇಶಕ ಸಿ. ವಿಶ್ವನಾಥ್ ಭರಣಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ. 0821- 2489972 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement