ಗ್ರೀನ್ ಬಡ್ಸ್ ಕಚೇರಿಗೆ ಬೀಗ: ಸಿಬ್ಬಂದಿ ಪರಾರಿ
ಕ.ಪ್ರ.ವಾರ್ತೆ ಕೆ.ಆರ್. ನಗರ ಜೂ. 21
ಗ್ರೀನ್ ಬಡ್ಸ್ ಅಗ್ರೋ ಫಾರ್ಮ್ಸ್ ಸಂಸ್ಥೆಗೆ ಸಾರ್ವಜನಿಕರು ಏಜೆಂಟರ ಮೂಲಕ ಕಟ್ಟಿದ ಠೇವಣಿ ಹಣವನ್ನು ಜೂ.20ರಂದು ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದರಿಂದ ಗುರುವಾರ ನೂರಾರು ಮಂದಿ ಠೇವಣಿದಾರರು ಹಣ ಪಡೆಯಲು ಕಚೇರಿಗೆ ಹೋದಾಗ, ಅಲ್ಲಿನ ಸಿಬ್ಬಂದಿ ಬೀಗ ಹಾಕಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.
ತಾಲೂಕಿನ 500ಕ್ಕೂ ಅಧಿಕ ಸಾರ್ವಜನಿಕರು ಏಜೆಂಟರ ಮೂಲಕ ಕಳೆದ ಐದು ವರ್ಷಗಳಿಂದ ಕೋಟ್ಯಂತರ ರು. ಠೇವಣಿ ಹಣ ಕಟ್ಟಿದ್ದರು. ಠೇವಣಿದಾರರು ತಮ್ಮ ಹಣ ವಾಪಸ್ ಪಡೆಯಲು ಹೋದಾಗ ಸಂಸ್ಥೆಯವರು ಇಂದು, ನಾಳೆ ಎಂಬ ಸಬೂಬು ಹೇಳಿಕೊಂಡು ಕಚೇರಿಗೆ ಅಲೆಸುತ್ತಿದ್ದರು ಎಂಬುದು ಹಣ ಕಳೆದುಕೊಂಡಿರುವವರ ಆರೋಪವಾಗಿದೆ.
ಬೀಗ ಜಡಿದು ಪರಾರಿ: ಕಚೇರಿಗೆ ಅಲೆದು ಹಣ ವಾಪಸ್ ಬರುವ ನಂಬಿಕೆ ಕಳೆದುಕೊಂಡ ನಾವು, ಇಲ್ಲಿನ ಸಿಬ್ಬಂದಿ ರತ್ನ, ಮಹದೇವ, ಮಂಜುಳ, ಸೀತಾರಾಮು ಅವರನ್ನು ನಮ್ಮ ಠೇವಣಿ ಹಣ ವಾಪಸ್ ಕೊಡಿಸುವಂತೆ ಕೇಳಿದಾಗ ಉಡಾಫೆಯ ಉತ್ತರ ನೀಡಿ ನಮ್ಮ ವಿರುದ್ಧವೇ ತಿರುಗಿ ಬಿದ್ದರು. ಕೂಡಲೆ ಅವರನ್ನು ಹತ್ತಿರದ ಠಾಣೆಗೆ ಕರೆದೊಯ್ದಾಗ ಪೊಲೀಸರ ಸಮ್ಮುಖದಲ್ಲಿ ಜೂ.20ರಂದು ಹಣ ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದರು. ಇಂದು ನಾವು ಹಣ ಪಡೆಯಲು ಕಚೇರಿಗೆ ಹೋದಾಗ ಬೀಗ ಜಡಿದು ಪರಾರಿಯಾಗಿದ್ದಾರೆ ಎಂದು ಠೇವಣಿದಾರರು ಗೋಳಾಡುತ್ತಿದ್ದುದು ಕಂಡು ಬಂತು.
ನಮಗೆ ನಮ್ಮ ಹಣ ಕೊಡಿಸಿ ಎಂದು ಪೊಲೀಸರ ಮೋರೆ ಹೋಗಿದ್ದೇವೆ. ಈಗಲಾದರೂ ಹಣ ಬರುತ್ತದೆಯೆ ಎಂದು ಮನವಿ ಮಾಡಿದ ಠೇವಣಿದಾರರೊಂದಿಗೆ ಮತನಾಡಿದ ಎಸ್ಐ ವನರಾಜ್, ಈ ಸಂಬಂಧ ನೀವು ಜಿಲ್ಲಾಧಿಕಾರಿಗಳಿಗೆ ದೂರು ನೀಡಿ. ನಾವು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಠಾಣೆಗೆ ಬಂದಿದ್ದ ಮಹಿಳೆಯರಿಗೆ ಸಲಹೆ ನೀಡಿದರು.
ಇದಕ್ಕೆ ಸಮ್ಮತಿಸಿದ ಮಹಿಳೆಯರು, ಹಣ ಕಳೆದುಕೊಂಡ ದುಗುಡದಲ್ಲಿ ಬೇರೆ ದಾರಿ ಕಾಣದೆ ಕೆಲ ಹೊತ್ತು ಕಣ್ಣೀರಿಡುತ್ತ ಠಾಣೆಯ ಮುಂದೆ ನಿಂತು, ತಮ್ಮ ನೋವು ವ್ಯಕ್ತಪಡಿಸಿದರಲ್ಲದೆ, ಸಂಸ್ಥೆಯ ಏಜೆಂಟರನ್ನು ತರಾಟೆಗೆ ತೆಗೆದುಕೊಂಡು ನಮ್ಮ ಹಣವನ್ನು ನೀವೆ ಕೊಡಬೇಕು ಇಲ್ಲದಿದ್ದರೆ ನಿಮ್ಮನ್ನು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.