ಬಸವಣ್ಣರ ವಿಚಾರಧಾರೆ ಜೀವನದಿಯಂತೆ
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಜೂ. 21
ಬಸವಣ್ಣನವರ ವಿಚಾರಧಾರೆಗಳು ಜೀವನದಿ ಇದ್ದಂತೆ ಎಂದು ಸುತ್ತೂರು ಮಠದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಇಲ್ಲಿನ ಶ್ರೀ ಸಾಯಿ ಸಮುದಾಯ ಭವನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ, ಬಸವ ಜಯಂತಿ ಆಚರಣಾ ಸಮಿತಿ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿರುವ ಅಸಮಾನತೆ, ಜಾತಿ ಭೇದ ಪದ್ದತಿ, ಮೇಲು ಕೀಳೆಂಬ ಪದ್ದತಿಯನ್ನು ಹೋಗಲಾಡಿಸಲು 12ನೇ ಶತಮಾನದಲ್ಲಿಯೇ ಶ್ರಮಿಸಿದ ಮಹಾನ್ ಚೇತನ ಬಸವಣ್ಣನವರು. ಅವರು ಜಗತ್ತೇ ತಮ್ಮತ್ತ ನೋಡುವಂತೆ ಸಮಾಜದ ಸುಧಾರಣಾ ಕ್ರಮಗಳನ್ನು ತಾವು ಅನುಸರಿಸುವ ಮೂಲಕ ಜಾರಿಗೆ ತರುವಲ್ಲಿ ಶ್ರಮಿಸಿದರು. ಅವರಿವರನ್ನು ತೆಗಳುವುದನ್ನು ಬಿಟ್ಟು, ತಮ್ಮನ್ನು ತಾವು ಸರಿಮಾಡಿಕೊಂಡಲ್ಲಿ ಸಮಾಜದ ಸುಧಾರಣೆ ಸಾಧ್ಯ ಎಂದು ಅಂದೆ ಬಸವಣ್ಣನವರು ಪ್ರತಿಪಾದಿಸಿದ್ದರು ಎಂದು ಹೇಳಿದರು.
ಬಸವೇಶ್ವರರ ಭಾವಚಿತ್ರವನ್ನು ಅನಾವರಣಗೊಳಿಸಿದ ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಮಾತನಾಡಿ, 12ನೇ ಶತಮಾನದಲ್ಲಿಯೇ ಜಡ್ಡುಗಟ್ಟಿದ ಸಮಾಜವನ್ನು ಬದಲಾವಣೆಯತ್ತ ಕೊಂಡೊಯ್ಯಲು ಪ್ರಯತ್ನಿಸಿದವರು ಬಸವಣ್ಣನವರು. ಅವರ ಆದರ್ಶ ಮತ್ತು ತತ್ವಗಳನ್ನು ಅನುಸರಿಸುವ ಮೂಲಕ ಸಮಾಜ ಸುಧಾರಣೆ ಕಾಣಬಹುದು. ಬಸವಣ್ಣನವರ ವಚನಗಳಲ್ಲಿರುವ ಸಂದೇಶಗಳನ್ನು ಇಂದು ದೇಶದ ಸಂವಿಧಾನದ ಮೂಲಕ ಕಾಣಬಹುದಾಗಿದೆ ಎಂದರು.
ಆತುರದ ನಿರ್ಧಾರ ಕಾರಣ: ಸಹಕಾರ ಸಂಘಗಳ ಸಾಲ ಮನ್ನಾ ವಿಚಾರ ಪ್ರಸ್ತಾಪಿಸಿದ ಅವರು, ಸಹಕಾರ ಬ್ಯಾಂಕ್ಗಳು ಮರುಸಾಲ ನೀಡುವ ಸಂದರ್ಭದಲ್ಲಿ 25 ಸಾವಿರ ಸಾಲವನ್ನು ಮುರಿದುಕೊಳ್ಳುತ್ತಿದ್ದು, ಇದು ಸರ್ಕಾರ ಆತುರದಲ್ಲಿ ತೆಗೆದುಕೊಂಡ ನಿರ್ಧಾರದಿಂದಾಗಿ ಆದುದ್ದಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದ್ದು, ಬ್ಯಾಂಕ್ಗಳು ಮರುಸಾಲವನ್ನು ನೀಡುವಾಗ ಮನ್ನಾವಾದ ಸಾಲವನ್ನು ಮರಿದುಕೊಳ್ಳದೆ ಸಾಲವನ್ನು ನೀಡುವಂತೆ ಹಾಗೂ ಸಾಲ ಮನ್ನಾ ಹಣವನ್ನು ಸರ್ಕಾರವೆ ಭರಿಸಲಿದೆ ಎಂದು ತಿಳಿಸಿದರು.
ಶಾಸಕ ಕೆ. ವೆಂಕಟೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜ ಸುಧಾರಣೆಯ ಬಗ್ಗೆ ಇಂದು ಭಾಷಣ ಮಾಡುತ್ತೇವೆ. ಆದರೆ 12ನೇ ಶತಮಾನದಲ್ಲಿಯೇ ಬಸವಣ್ಣನವರು ಭಾಷಣ ಮಾಡದೇ ಸುಧಾರಣಾ ಕ್ರಮಗಳನ್ನು ಕಾರ್ಯರೂಪದಲ್ಲಿ ಮಾಡಿ ತೋರಿಸಿದ್ದಾರೆ ಎಂದು ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಶಿವರಾಜಪ್ಪ ಶರಣರ ವಿಚಾರಧಾರೆ ಹಾಗೂ ಆಧುನಿಕ ಜಗತ್ತು ವಿಚಾರದ ಬಗ್ಗೆ ಉಪನ್ಯಾಸ ನೀಡಿದರು. ಮಾಜಿ ಶಾಸಕ ಎಚ್.ಸಿ. ಬಸವರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಾಜಿ ಸಚಿವ ಎಂ. ಮಹದೇವ್ ಮಾತನಾಡಿದರು. ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಬೆಟ್ಟದಪುರದ ಸಲಿಲಾಖ್ಯ ಮಠದ ಚನ್ನಬಸವದೇಶಿಕೇಂದ್ರ ಸ್ವಾಮೀಜಿ, ವಿರಾಜಪೇಟೆ ಕಳಂಚೇರಿ ಅರಮೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಅರಕಲಗೂಡಿನ ದೊಡ್ಡ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಎಪಿಎಂಸಿ ಅಧ್ಯಕ್ಷ ಹೊಲದಪ್ಪ, ತಾಪಂ ಉಪಾಧ್ಯಕ್ಷ ಯೋಗೇಶ್, ಸದಸ್ಯೆ ಬಿ.ವಿ. ಅನಿತಾ, ಪಪಂ ಸದಸ್ಯರಾದ ಅನಿತಾಶೇಖರ್, ಪಿ.ವಿ. ನಂಜುಂಡಸ್ವಾಮಿ, ಸರ್ಕಲ್ ಇನ್ಸ್ಪೆಕ್ಟರ್ ಪಿ.ವಿ. ವೆಂಕಟೇಶ್, ಪಂಕಜರೆಡ್ಡಿ, ಸಿ.ಸಿ. ಸದಾಶಿವಪ್ಪ ಇದ್ದರು.