ಮೀಸಲಾತಿ ಉದ್ದೇಶ ಸ್ಪಷ್ಟವಾಗಲಿ: ಸಾಹಿತಿ ದೇವನೂರು ಮಹಾದೇವ
ಕ.ಪ್ರ.ವಾರ್ತೆ ಮೈಸೂರು ಜೂ. 21
ಲೈಂಗಿಕ ಶೋಷಿತರ ಮೀಸಲಾತಿಯ ಉದ್ದೇಶವನ್ನು ಮೊದಲು ಸ್ಪಷ್ಟಪಡಿಸಿಕೊಳ್ಳಬೇಕು ಎಂದು ಸಾಹಿತಿ ದೇವನೂರ ಮಹಾದೇವ ಹೇಳಿದರು.
ಒಡನಾಡಿ ಸಂಸ್ಥೆ ಶುಕ್ರವಾರ ನಗರದಲ್ಲಿ ಏರ್ಪಡಿಸಿದ್ದ ಲೈಂಗಿಕ ಶೋಷಿತರ ಮೀಸಲಾತಿಗಾಗಿ ಕ್ರಿಯಾ ಯೋಜನೆ ಕುರಿತ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಲೈಂಗಿಕ ಶೋಷಿತ ಮಕ್ಕಳು ಶಾಲಾ, ಕಾಲೇಜು ದಾಖಲಾತಿ ವೇಳೆ ಅಥವಾ ಯಾವುದಾದರೂ ಸವಲತ್ತಿಗೆ ಅರ್ಜಿ ಸಲ್ಲಿಸುವಾಗ ತಂದೆಯ ಹೆಸರಿನ ಬದಲಿಗೆ ತಾಯಿಯ ಹೆಸರು ನಮೂದಿಸುವಂತೆ ಆಗಬೇಕು. ಅದಕ್ಕೆ ಬೇಕಾದ ಬದಲಾವಣೆಯನ್ನು ಸರ್ಕಾರ ಮಾಡಬೇಕು. ಅಲ್ಲದೆ ಮೀಸಲಾತಿಯ ಉದ್ದೇಶವನ್ನು ಮೊದಲು ಸ್ಪಷ್ಟಪಡಿಸಿಕೊಂಡು, ಮೀಸಲಾತಿಯ ದುರ್ಬಳಕೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಮಾತನಾಡಿ, ಸರ್ಕಾರಿ ಕ್ಷೇತ್ರದಲ್ಲಿ ಮಾತ್ರವಲ್ಲದೆ ಖಾಸಗಿ ಕ್ಷೇತ್ರದಲ್ಲಿಯೂ ಅನಾಥರಿಗೆ ಮೀಸಲಾತಿ ದೊರೆಯಬೇಕು. ಖಾಸಗಿ ಸಂಸ್ಥೆಗಳಲ್ಲಿ ಮೀಸಲಾತಿ ದೊರೆಯಬೇಕು ಎಂದರು.
ಪತ್ರಕರ್ತ ಕೆ. ಶಿವಕುಮಾರ್ ಪ್ರಾಸ್ತಾವಿಕ ಭಾಷಣ ಮಾಡಿದರು. ವಿಚಾರವಾದಿ ಪ. ಮಲ್ಲೇಶ್, ಸಾಹಿತಿ ಪ್ರೊ.ಕಾಳೇಗೌಡ ನಾಗವಾರ, ರೈತ ಮುಖಂಡ ಬಡಗಲಪುರ ನಾಗೇಂದ್ರ, ಟಿ.ಎಲ್. ಪಾಟೀಲ್, ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮತ್ತು ಪರಶು ಇದ್ದರು