ಕೋಳದ ಸಂಕೋಲೆಯಲ್ಲಿ ಯುವಕ
ಮೈಸೂರು: ಆತ ಯಾರು, ಎಲ್ಲಿಯವನು, ಇಲ್ಲಿಗೆ ಯಾಕೆ ಬಂದಿದ್ದಾನೆ.... ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ, ಆತ ಇತರರ ಗಮನವನ್ನು ತನ್ನತ್ತ ಸೆಳೆಯುತ್ತಿದ್ದಾನೆ. ಆತನ ಹುಟ್ಟಿನಿಂದ ಬುದ್ಧಿಮಾಂದ್ಯನೋ ಅಥವಾ ನಂತರ ಮಾನಸಿಕ ಅಸ್ವಸ್ಥನಾಗಿರುವನೋ ಎಂಬ ಪ್ರಶ್ನೆಗಳಿಗೆ ಉತ್ತರವಿಲ್ಲ. 25 ವರ್ಷದ ಆ ಯುವಕನ ಕಾಲಿಗೆ ಕಬ್ಬಿಣದ ಕೋಳ ಹಾಕಲಾಗಿದೆ. ಅದರಿಂದ ಬಿಡಿಸಿಕೊಳ್ಳದೇ ಮೈಸೂರಿನಲ್ಲಿ ಸುತ್ತಾಡುತ್ತಿದ್ದಾನೆ. ನಗರದ ಮೆಟ್ರೋಪೋಲ್ ವೃತ್ತದ ಹತ್ತಿರದ ಫುಟ್ಪಾತ್ನಲ್ಲಿ ಶನಿವಾರ ಆತ ಮಲಗಿದ್ದ. ಆತನ ಕಾಲಿನಲ್ಲಿದ್ದ ಕಬ್ಬಿಣದ ಕೋಳ ಕಂಡವರು, ಆತನನ್ನು ವಿಚಾರಿಸುತ್ತಿದ್ದರು. ನಾನು ಮಸ್ಸೂರಿ ಬಳಿಯ ಪುರುಸಾಲಿಯವನು. ನಾನು ಹುಚ್ಚ ಎಂದು ಮನೆಯವರು ಕಾಲಿಗೆ ಕೋಳ ಹಾಕಿ ಕಟ್ಟಿ ಹಾಕಿದ್ದರು. ಅವರಿಂದ ತಪ್ಪಿಸಿಕೊಂಡು ಬಂದುಬಿಟ್ಟೆ. ಇಲ್ಲಿಗೆ ನಾನು ಯಾಕೆ ಬಂದೆ ಎಂಬುದು ಗೊತ್ತಿಲ್ಲ ಎಂದು ಹಿಂದಿಯಲ್ಲಿ ಉತ್ತರಿಸುತ್ತಾನೆ. ತನ್ನ ಹೆಸರು ಮತ್ತು ಇತರೆ ವಿವರ ಕೇಳಿದರೆ ಗೊತ್ತಿಲ್ಲ ಎನ್ನುತ್ತಿದ್ದಾನೆ.
ಪರಾರಿ: ಈ ವಿಚಾರ ಗೊತ್ತಾಗಿ ದೇವರಾಜ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ವಿಚಾರಿಸಿದರು. ಸೂಕ್ತ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲು ಜೀಪ್ ಹತ್ತಿಸುವ ವೇಳೆ ಆ ಯುವಕ ಯಾರ ಕೈಗೂ ಸಿಗದೇ ಪರಾರಿಯಾದ. ಪೊಲೀಸರು ಆತನನ್ನು ಹಿಂಬಾಲಿಸಿದರಾದರೂ ಆತ ಮಾತ್ರ ಸಿಗಲಿಲ್ಲ.