ದಲಿತ ವಿರೋಧಿ ನೀತಿ: ಐಲಾಪುರ ರಾಮು ಆರೋಪ
ಕ.ಪ್ರ.ವಾರ್ತೆ ಬೈಲುಕುಪ್ಪೆ ಜೂ. 22
ತಿರುಮಲಾಪುರ ಗ್ರಾಮದ ಭೂಮಿ ವಿಚಾರಕ್ಕೆ ಸಂಬಂಧಪಟ್ಟಂತೆ ಪೊಲೀಸರು ದಲಿತ ವಿರೋಧಿ ನೀತಿ ಅನುಸರಿಸುತ್ತಾ, ಬಂಡವಾಳಶಾಹಿಗಳ ಒತ್ತಡದಿಂದ ಪದೇ ಪದೇ ಕಿರುಕುಳ ಕೊಡುತ್ತಿದ್ದಾರೆ ಎಂದು ದಸಂಸ ಜಿಲ್ಲಾ ಸಂಚಾಲಕ ಐಲಾಪುರ ರಾಮು ಆರೋಪಿಸಿದರು.
ತಿರುಮಲಾಪುರ ಗ್ರಾಮದ ಬಡ ದಲಿತ ಮಹದೇವಯ್ಯ ಹಾಗೂ ರಾಜೇಗೌಡ ಅವರಿಗೂ ಜಮೀನು ವಿವಾದ ನ್ಯಾಯಾಲಯದಲ್ಲಿ ನಡೆದು, ಇತ್ತೀಚೆಗೆ ಮಹದೇವಯ್ಯನವರ ಪರ ತೀರ್ಪು ಬಂದಿರುವುದರಿಂದ ಕುಪಿತಗೊಂಡ ರಾಜೇಗೌಡ ಪೊಲೀಸರ ಮೂಲಕ ಬಡ ದಲಿತ ಮಹದೇವಯ್ಯನ ಮೇಲೆ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.
ಈ ಹಿನ್ನೆಲೆಯಲ್ಲಿ ಶನಿವಾರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಆದರೆ, ಹುಣಸೂರಿನ ಡಿವೈಎಸ್ಪಿ ಮುದ್ದು ಮಹದೇವಯ್ಯ, ಸರ್ಕಲ್ ಇನ್ಸ್ಪೆಕ್ಟರ್ ಪಿ.ವಿ. ವೆಂಕಟೇಶ್ ಅವರು ಪ್ರತಿಭಟನಾಕಾರರ ಮನವೊಲಿಸಿ ಜಮೀನು ಅಳತೆ ಮಾಡಿ ನ್ಯಾಯ ಒದಗಿಸಲು ನಾವು ಸದಾ ಬದ್ಧರಾಗಿದ್ದೇವೆ ಎಂದು ಆಶ್ವಾಸನೆ ನೀಡಿದ್ದರಿಂದ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು ಎಂದು ತಿಳಿಸಿದರು.
ತಾಪಂ ಸದಸ್ಯ ಮಹದೇವ್, ಗ್ರಾಪಂ ಸದಸ್ಯ ರಾಜು ತಿರುಮಲಾಪುರ, ಮಹದೇವ್, ಮುಖಂಡರಾದ ರಾಧಾಕೃಷ್ಣ, ಅಯ್ಯಪ್ಪ, ಬಾಲಸುಬ್ರಹ್ಮಣ್ಯ, ಸ್ವಾಮಿ, ಚಲುವರಾಜು, ರವೀಶ್, ವೆಂಕಟೇಶ್, ಪ್ರಕಾಶ್, ಮಧು, ಕೃಷ್ಣಕುಟ್ಟಿ, ರುದ್ರಸ್ವಾಮಿ, ಮಂಜುನಾಯಕ, ರಾಮೇಗೌಡ, ದೇವಯ್ಯ, ದಿನೇಶ್, ರಂಜಿತ್, ಮೋಹನ್, ರಾಜೇಗೌಡ, ಸುರೇಶ್ ಭಾಗವಹಿಸಿದ್ದರು