ಸರ್ಕಾರಿ ಜಾಗ ಒತ್ತುವರಿ ತೆರವು
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಜೂ. 22
ಖಾಸಗಿ ಜಮೀನಿನ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಕಾಲುದಾರಿಯನ್ನು ತೆರವುಗೊಳಿಸಲಾಯಿತು.
ತಾಲೂಕಿನ ಬೆಣಗಾಲು ಗ್ರಾಮದ ಸರ್ವೆ ನಂ. 42, 44 ಮತ್ತು 45 ರಲ್ಲಿ ಬೆಣಗಾಲು- ದೊಡ್ಡಕಮರವಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ 2 ಕಿಮೀ ಉದ್ದದ ಕಾಲುದಾರಿ ಇದಾಗಿದ್ದು, ಈ ಹಿಂದಿನಿಂದಲೂ ಇದ್ದ ತಿರುಗಾಡುವ ಸರ್ಕಾರಿ ಕಾಲುದಾರಿಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದರು.
ತಹಸೀಲ್ದಾರ್ ಎಂ.ಕೆ. ಸವಿತಾ ಅವರ ನಿರ್ದೇಶನದಂತೆ ಉಪ ತಹಸೀಲ್ದಾರ್ ಸಿ.ಜಿ. ರವಿಶಂಕರ್ ನೇತೃತ್ವದಲ್ಲಿ ಸರ್ವೆಯರ್ ಜಯಕುಮಾರ್ ಹಾಗೂ ಆರ್ಐ ಶ್ರೀಧರ್ ಒತ್ತುವರಿ ಓಣಿ ಜಾಗವನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸಿದರು. ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಯಾವುದೇ ಘರ್ಷಣೆಗೆ ಅವಕಾಶ ನೀಡದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.