ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪಂಚಾಯತ್ರಾಜ್ ತಿದ್ದುಪಡಿಗೆ ಅಂಕಿತ ಬೇಡ

Rashmi Kasaragodu
Updated On : 24 Jun 2013, 12:43 pm

ಕ.ಪ್ರ.ವಾರ್ತೆ   ಮೈಸೂರು   ಜೂ. 23
ಸ್ಥಳೀಯ ಆಡಳಿತ ಸಂಸ್ಥೆಗಳಾದ ಗ್ರಾಪಂಗಳಿಗೆ ಶಾಸನಬದ್ಧ ಅಧಿಕಾರ, ಸಾಮಾಜಿಕ ನ್ಯಾಯಕ್ಕೆ ಒತ್ತು ಹಾಗೂ ಶಾಸನಾನುದಾನವನ್ನು ನೀಡದೆ ಕರ್ನಾಟಕ ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆಗೆ ಒಪ್ಪಿಗೆ ಸೂಚಿಸಿ ಅಂಕಿತ ಹಾಕದಿರುವಂತೆ ಕರ್ನಾಟಕ ವಿಕಾಸವಾಹಿನಿ ರಾಜ್ಯಪಾಲರಿಗೆ ಮನವಿ ಮಾಡಿದೆ.
ಸಂವಿಧಾನಕ್ಕೆ 73ನೇ ತಿದ್ದುಪಡಿ ತಂದು ಗ್ರಾಮಸಭೆಗೆ ಸಂವಿಧಾನಬದ್ಧ ಅಧಿಕಾರ ನೀಡಿರುವುದು ಒಳ್ಳೆಯ ವಿಚಾರ. ಗ್ರಾಪಂಗಳನ್ನು ಸ್ಥಳೀಯ ಸರ್ಕಾರಗಳಾಗಿ ಪರಿಗಣಿಸಿ, ಗ್ರಾಮಾಭಿವೃದ್ಧಿ, ಸಾಮಾಜಿಕ ನ್ಯಾಯ, ಸ್ವಚ್ಛತೆ, ನಾಗರಿಕ ಸೌಕರ್ಯ, ಫಲಾನುಭವಿಗಳನ್ನು ಆಯ್ಕೆ ಮಾಡುವ ಅಧಿಕಾರ ನೀಡಿರುವುದು ಹಾಗೂ ವರ್ಷಕ್ಕೆ ಎರಡು ಬಾರಿ ಗ್ರಾಮ ಮತ್ತು ವಾರ್ಡ್ ಸಭೆ ನಡೆಸುವ ಜವಾಬ್ದಾರಿ ನೀಡಿರುವುದು ಸರಿಯಾದ ಕ್ರಮವಾಗಿದೆ ಎಂದು ವಾಹಿನಿಯ ರಾಜ್ಯ ಸಂಚಾಲಕ ಡೀಡ್ ಸಂಸ್ಥೆ ಮುಖ್ಯಸ್ಥ ಎಸ್. ಶ್ರೀಕಾಂಥ್ ಹಾಗೂ ನಗರ ಸಂಚಾಲಕ ಪೂರಿಗಾಲಿ ಮರಡೇಶಮೂರ್ತಿ ಹೇಳಿದ್ದಾರೆ.
ಆದರೆ ಪಂಚಾಯಿತಿಗಳಿಗೆ ಶಾಸನಬದ್ಧ ಅನುದಾನ ಈಗ ಕೇವಲ 6 ಲಕ್ಷ ಇದ್ದು, ಇದರಲ್ಲಿ ಶೇ.60 ವಿದ್ಯುತ್ ಖರ್ಚಿಗೆ ಮೂಲದಲ್ಲೆ ವಜಾ ಮಾಡಿಕೊಳ್ಳುತ್ತಾರೆ. ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನವೂ ಇಲ್ಲ. ಪಂಚಾಯಿತಿ ಸದಸ್ಯರಿಗೆ ಗೌರವಧನವೂ ಇಲ್ಲ. ಆದರೆ ಜವಾಬ್ದಾರಿ ಮಾತ್ರ ಜಾಸ್ತಿ. ಆದ್ದರಿಂದ ಈ ಹೊಸ ಮಸೂದೆಯಲ್ಲಿ ಶಾಸನಬದ್ಧ ಅಂಶಗಳನ್ನು ಸೇರಿಸಿ ತಿದ್ದುಪಡಿ ತಂದ ನಂತರವೇ ತಾವು ಒಪ್ಪಿಗೆ ಸೂಚಿಸಿ ಅಂಕಿತ ಹಾಕಬೇಕು ಎಂದು ಕೋರಿದ್ದಾರೆ.
ಅಧಿಕಾರಿಗೆ ಜವಾಬ್ದಾರಿ ವಹಿಸಿ: ವಾರ್ಡ್ ಸಭೆಯು ಆರು ತಿಂಗಳಿಗೊಮ್ಮೆ ಆ ಕ್ಷೇತ್ರದ ಸದಸ್ಯನ ಅಧ್ಯಕ್ಷತೆಯಲ್ಲಿ ಕಡ್ಡಾಯವಾಗಿ ನಡೆಯಬೇಕು. ಸಭೆ ಕರೆಯುವ ಜವಾಬ್ದಾರಿ ಪಂಚಾಯಿತಿ ಅಧಿಕಾರಿಗೆ ವಹಿಸಬೇಕು. ವಾರ್ಡ್ ಸಭೆಯಲ್ಲಿ ಚರ್ಚಿಸಿ ತೆಗೆದುಕೊಂಡ ನಿರ್ಣಯಗಳನ್ನು ಜಾರಿಗೊಳಿಸಲು ತಗಲುವ ವೆಚ್ಚಗಳನ್ನು ಸರ್ಕಾರ ತನ್ನ ಯೋಜನೆಯ ಹಣದಲ್ಲಿ ನೀಡಬೇಕಾದ್ದು ಕಡ್ಡಾಯವಾಗಿರಲಿ. ವಾರ್ಡ್ನ ಗ್ರಾಮ ಸಭೆಯ ನಿರ್ಣಯಗಳಿಗೆ ಸಂಬಂಧಿಸಿದ ಇಲಾಖೆಗಳ ಮೂಲಕ ಪ್ರಾಸ್ತಾವಗಳನ್ನು ತರಿಸಿಕೊಂಡು ಅಭಿವೃದ್ಧಿಗೆ ಹಣ ನೀಡುವುದು ಸರ್ಕಾರದ ಕರ್ತವ್ಯ ಎಂದು ಕಾನೂನಿನಲ್ಲಿ ಅಳವಡಿಸಬೇಕು ಎಂದಿದ್ದಾರೆ. ಪಂಚಾಯ್ತಿ ಮಟ್ಟದಲ್ಲಿ ಗ್ರಾಮ ಸಭೆಯನ್ನು ಆರು ತಿಂಗಳಿಗೊಮ್ಮೆ ನಡೆಸುವ ಜವಾಬ್ದಾರಿಯನ್ನು ಪಂಚಾಯಿತಿ ಅಧ್ಯಕ್ಷರಿಗೆ ವಹಿಸಬೇಕು ಎಂದು ಕೋರಿದ್ದಾರೆ.
ಪ್ರತಿ ಪಂಚಾಯಿತಿಗೆ ಸರ್ಕಾರವು ಪ್ರತಿ ವರ್ಷ ಒಂದು ಹಳ್ಳಿಯಂತೆ ನಿರ್ಮಲ ಗ್ರಾಮ ಯೋಜನೆ, ಸುವರ್ಣ ಗ್ರಾಮ ಯೋಜನೆ, ಹಸಿರು ಹಳ್ಳಿ ಜೀವ ವೈವಿಧ್ಯ ವಲಯ, ಕೆರೆ ಪುನರುತ್ಥಾನ, ಉದ್ಯೋಗ ಖಾತ್ರಿ ಕಾಯ್ದೆಯ ಅಡಿ ಭೂಮಿ ಸಾರ, ಅಂತರ್ಜಲ, ಜೈವಿಕ ಇಂಧನ ಮರಗಳ ಅಭಿವೃದ್ಧಿಗೆ ಕಾಯ್ದೆಯಲ್ಲಿ ನಿಖರವಾಗಿ ಕಾಣಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೃಷಿ, ಶಿಕ್ಷಣ, ಆರೋಗ್ಯ, ಸಾಮಾಜಿಕ ನ್ಯಾಯ, ನೀರು, ವಿದ್ಯುತ್, ಪ.ಜಾತಿ, ಪಂಗಡ, ಮಹಿಳೆ, ಮಕ್ಕಳ ರಕ್ಷಣೆಗೆ ಪಂಚಾಯಿತಿಗೆ ಹೆಚ್ಚಿನ ಅಧಿಕಾರ ನೀಡಬೇಕು. ರಾಜ್ಯದ ಆಯವ್ಯಯದ ಶೇ.20 ಭಾಗ ಪಂಚಾಯ್ತಿಗಳ ಮೂಲಕವೆ ಖರ್ಚು ಮಾಡಲು ಕಾನೂನಿನಲ್ಲಿ ಸೇರಿಸಬೇಕು ಎಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement