ಮಣಿಪಾಲ ಘಟನೆಗೆ ಖಂಡನೆ
ಮೈಸೂರು: ಗ್ರಂಥಾಲಯದಿಂದ ಮನೆಗೆ ಹೋಗುತ್ತಿದ್ದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯ ಮೇಲೆ ನಡೆದಿರುವ ಅತ್ಯಾಚಾರದ ಘಟನೆಯನ್ನು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ತೀವ್ರವಾಗಿ ಖಂಡಿಸಿದೆ. ಇಡೀ ಪ್ರಕರಣದ ಸಮಗ್ರ ತನಿಖೆ ನಡೆಸಿ, ದುಷ್ಕರ್ಮಿಗಳನ್ನು ಬಂಧಿಸಿ ಶಿಕ್ಷೆ ನೀಡಬೇಕು. ಅತ್ಯಾಚಾರಕ್ಕೊಳಗಾಗಿರುವ ವಿದ್ಯಾರ್ಥಿನಿಗೆ ಮಾನಸಿಕ ಸ್ಥೈರ್ಯ ನೀಡುವುದರ ಜತೆಗೆ ಎಲ್ಲಾ ರೀತಿಯ ನೆರವು ನೀಡುವಂತೆ ಎಐಎಂಎಸ್ಎಸ್ ಕಾರ್ಯದರ್ಶಿ ಪಿ.ಎಸ್. ಸಂಧ್ಯಾ ಒತ್ತಾಯಿಸಿದ್ದಾರೆ. ಮಹಿಳೆಯರ ಮೇಲೆ ದಿನೇ ದಿನೇ ಅತ್ಯಾಚಾರದಂತಹ ಘಟನೆಗಳು ಮರುಕಳಿಸುತ್ತಿದ್ದು, ಇದು ನಾಗರಿಕ ಸಮಾಜಕ್ಕೆ ಕಳಂಕಪ್ರಾಯವಾಗಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಕಾನೂನಿನ ಕ್ರಮಗಳೊಂದಿಗೆ ಅಶ್ಲೀಲತೆ, ಹಿಂಸೆಯ ಪ್ರಚಾರ ನಿಷೇಧಿಸುವ ಕೆಲಸವನ್ನು ಸರ್ಕಾರ ಶೀಘ್ರಗತಿಯಲ್ಲಿ ಮಾಡಬೇಕು ಎಂದಿದ್ದಾರೆ.