ಹೇಳಿದ್ದೊಂದು ಮಾಡಿದ್ದೊಂದು!?
ದೇವರಾಜು ಕಪ್ಪಸೋಗೆ
ಕ.ಪ್ರ.ವಾರ್ತೆ ಚಾಮರಾಜನಗರ ಜೂ. 23
ಸಾರ್ವಜನಿಕರಿಗೆ ಅಗ್ಗದ ಸಾರಿಗೆ ನೀಡುವ ಮೂಲಕ ಜನರಿಗೆ ಸೌಕರ್ಯ ಕಲ್ಪಿಸಬೇಕಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರಯಾಣಿಕರಿಗೆ ಹೊರೆಯಾಗುತ್ತಲೇ ಬಂದಿತ್ತು. ಇದೀಗ ಹೊಸ ದರ ಏರಿಕೆಯಾದ ಮೇಲಂತೂ ಪ್ರಯಾಣಿಕ ಕನಿಷ್ಠ 10ರ ನೋಟಿಲ್ಲದೆ ಸಾರಿಗೆ ಸಂಸ್ಥೆ ಬಸ್ ಹತ್ತುವಂತೆ ಇಲ್ಲ.
ಸರ್ಕಾರ ಪ್ರತಿ ಬಾರಿಯೂ ಬಸ್ ಪ್ರಯಾಣದ ದರ ಏರಿಕೆ ಮಾಡಿದಾಗಲೂ ಶೇ. ಇಂತಿಷ್ಟು ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ ಎಂದು ಘೋಷಣೆ ಮಾಡುತ್ತದೆ. ಆದರೆ, ಘೋಷಣೆ ಮಾಡಲಾದ ಶೇಕಡವಾರು ಪ್ರಮಾಣಕ್ಕೂ ಹೆಚ್ಚಳ ಮಾಡಲಾದ ಪ್ರಮಾಣ ಭಾರಿ ವ್ಯತ್ಯಾಸ ಕಂಡು ಬರುತ್ತಿದ್ದು, ಇದನ್ನು 'ಕನ್ನಡಪ್ರಭ' ಪತ್ತೆ ಹಚ್ಚಿದೆ.
ನೂತನ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳು ತುಂಬುವ ಮುನ್ನವೇ ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರವನ್ನು ಶೇ.10.50 ಹೆಚ್ಚಳ ಮಾಡಿತು. ಆದರೆ, ಇದು ಮೇಲ್ನೋಟಕ್ಕೆ ಮಾತ್ರ. ಪ್ರತಿ ಹಂತದಲ್ಲೂ ಘೋಷಣೆಗಿಂತ ಹೆಚ್ಚಿನ ದರವನ್ನೇ ಪ್ರಯಾಣಿಕರು ತೆತ್ತಬೇಕಾಗಿದ್ದು, ಇದರಿಂದ ನಿತ್ಯ ಪ್ರಯಾಣಿಕರು ಮತ್ತು ಕಂಡಕ್ಟರ್ಗಳ ನಡುವೆ ಪ್ರತಿ ಬಸ್ನಲ್ಲೂ ಕಾದಾಟ ಆರಂಭವಾಗಿದೆ. ಸರ್ಕಾರ 10.50ರಷ್ಟು ಹೆಚ್ಚಳ ಮಾಡಿದೆ ಆದರೆ, ನೀವು ಹೆಚ್ಚಿನ ಹಣ ಪಡೆಯುತ್ತಿದ್ದಿರಾ ಎಂದು ಪ್ರಯಾಣಿಕರು ಜಗಳಕ್ಕಿಳಿಯುತ್ತಿದ್ದು, ಕಂಡಕ್ಟರ್ಗೆ ಪ್ರಯಾಣಿಕರಿಗೆ ನೀಡಲು ಉತ್ತರವೇ ಇಲ್ಲವಾಗಿದೆ.
ಸರ್ಕಾರ ಘೋಷಣೆ ಮಾಡಿದಂತೆ ಶೇ. 10.50 ಬದಲು 1ನೇ ಹಂತಕ್ಕೆ ಶೇ. 12.5, 2ನೇ ಹಂತಕ್ಕೆ ಶೇ. 16. 67, 3ನೇ ಹಂತಕ್ಕೆ ಶೇ. 22, 4ನೇ ಹಂತಕ್ಕೆ ಶೇ.19, 5ನೇ ಹಂತಕ್ಕೆ ಶೇ.11, 6ನೇ ಹಂತಕ್ಕೆ ಶೇ. 9.37, 7ನೇ ಹಂತಕ್ಕೆ ಶೇ.14.29, 8ನೇ ಹಂತಕ್ಕೆ ಶೇ. 12.5, 9ನೇ ಹಂತಕ್ಕೆ ಶೇ.11.11, 10ನೇ ಹಂತಕ್ಕೆ ಶೇ.10 ಮತ್ತು 20ನೇ ಹಂತಕ್ಕೆ ಶೇ.10ರಷ್ಟು ಹೆಚ್ಚಳ ಮಾಡಿದ್ದು, ಅದರಲ್ಲೂ 3 ಮತ್ತು 4 ಹಂತದ ಹೆಚ್ಚಳ ಪ್ರಯಾಣಿಕರಿಗೆ ಭಾರಿ ಹೊರೆಯಾಗಿದೆ. ಸಾಮಾನ್ಯವಾಗಿ 3 ಮತ್ತು 4 ಹಂತದವರೆಗೆ ಮಧ್ಯಮ ವರ್ಗದ ಜನರು ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣ ಮಾಡುತ್ತಾರೆ.
ಇದರಿಂದಾಗಿ ಮಧ್ಯಮ ವರ್ಗದ ಪ್ರಯಾಣಿಕರಿಗೆ ಕೆಎಸ್ಆರ್ಟಿಸಿ ಪ್ರಯಾಣ ದರ ಅಗತ್ಯಕ್ಕಿಂತ ಹೆಚ್ಚಿಗೆ 2, 3 ಮತ್ತು 4ನೇ ಹಂತದಲ್ಲಿ ಹೆಚ್ಚಳವಾಗಿರುವುದರಿಂದ ಬಸ್ ಹತ್ತಬೇಕೋ ಬೇಡವೋ ಎಂದು ಒಮ್ಮೆ ಯೋಚಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಶೇ.27.3ರಷ್ಟು ಏರಿಕೆ: ರಾಜ್ಯಾದಾದ್ಯಂತ ಶೇ. 10.50 ಬದಲಿಗೆ ಶೇ. 22ರಷ್ಟು ಹೆಚ್ಚಳವಾಗಿರುವುದು ಒಂದು ಕಡೆಯಾದರೆ ಮೈಸೂರಿನಿಂದ ನಂಜನಗೂಡಿನ ನಂಜುಂಡೇಶ್ವರ ದರ್ಶನ ಪಡೆಯಲು ಬರುವ ಭಕ್ತರಿಗೆ ಶೇ.27.3ರಷ್ಟು ಏರಿಕೆಯಾಗಿದೆ. ಅಲ್ಲದೆ, ಚಾಮರಾಜನಗರ, ಗುಂಡ್ಲುಪೇಟೆ ಮತ್ತು ಕೊಳ್ಳೇಗಾಲದಿಂದ ಮೈಸೂರಿಗೆ ಶೇ. 25 ರಷ್ಟು ಹೆಚ್ಚಳವಾಗಿದೆ.
ಹಿಂದೆ ಮೈಸೂರಿನಿಂದ ನಂಜನಗೂಡಿಗೆ 21 ಇತ್ತು. ಇದೀಗ 25 ಆಗಿದೆ.
ಮೈಸೂರಿನಿಂದ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನಕ್ಕೆ 22 ಇದ್ದದ್ದು, ಇದೀಗ 28 ಆಗಿದೆ. ಅಂದರೆ ಶೇ. 27.3ರಷ್ಟು ಹೆಚ್ಚಳವಾಗಿದೆ.
ಚಾಮರಾಜನಗರ ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ ಮತ್ತು ಕೊಳ್ಳೇಗಾಲದಿಂದ ಮೈಸೂರಿಗೆ 40 ಇದ್ದದ್ದು, ಇದೀಗ 50 ಆಗಿದೆ. ಶೇ.25ರಷ್ಟು ಹೆಚ್ಚಳವಾಗಿದೆ. ಇದರಿಂದಾಗಿ ಪ್ರಯಾಣಿಕರಿಗೆ ಭಾರಿ ಹೊರೆಯಾಗಿದೆ.
ಹಂತ ಹಿಂದಿನ ದರ ಈಗಿನ ದರ ಆಗಬೇಕಿದ್ದು ಹೆಚ್ಚಳವಾಗಿದ್ದು ರು ಹೆಚ್ಚಳ ಶೇ.
1 8 9 84 ಪೈಸೆ 1 12.5
2 12 14 1.26 2 16.67
3 18 22 1.89 4 22
4 21 25 2.20 4 19
5 27 30 2.84 3 11
6 32 35 3.36 3 9.37
7 35 40 3.68 5 14.29
8 40 45 4.20 5 12.5
9 45 50 4.73 5 11.11
10 50 55 5.25 5 10
20 100 110 10.50 10 10
ರಾಜ್ಯಾದ್ಯಂತ ಕೇಂದ್ರ ಕಚೇರಿ ನಿಗಧಿ ಮಾಡಿದ ದರ ತೆಗೆದುಕೊಳ್ಳುತ್ತಿದ್ದೇವೆ. ಚಾಮರಾಜನಗರ ಜಿಲ್ಲೆಯಲ್ಲಿ ಪ್ರಯಾಣ ದರ ಕಡಮೆ ಇತ್ತು. ನಿಯಾಮನುಸಾರ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲದಿಂದ ಮೈಸೂರಿಗೆ 55ರು. ತೆಗೆದುಕೊಳ್ಳಬೇಕು. ಆದರೆ, 50 ರು. ತೆಗೆದುಕೊಳ್ಳುಲಾಗುತ್ತಿದೆ.
- ಬಿ.ವಿ. ಶ್ರೀನಿವಾಸ್, ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ, ಚಾಮರಾಜನಗರ.
ಸರ್ಕಾರ ಪ್ರತಿ ವರ್ಷ ಕೆಎಸ್ಆರ್ಟಿಸಿ ಬಸ್ ದರ ಏರಿಕೆ ಮಾಡುತ್ತಾ ಬಂದಿದ್ದು, ಈ ಬಾರಿ ಶೇ.10.50 ದರ ಏರಿಕೆ ಮಾಡುವುದಾಗಿ ಪ್ರಕಟಿಸಿ ಕೆಲವು ಹಂತಗ ಳಲ್ಲಿ ರಾಜ್ಯಾದ್ಯಂತ ಶೇ. 22ರ ವರೆಗೂ ಹೆಚ್ಚಳ ಮಾಡಿದೆ. ಇದರಿಂದಾಗಿ ಹತ್ತಿರದ ಸ್ಧಳಗಳಿಗೆ ಸಾಮಾನ್ಯ ಪ್ರಯಾಣಿಕರು ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣ ಮಾಡುವುದೇ ಕಷ್ಟವಾಗಿದೆ.
- ಬಿ. ಪದ್ಮಾ, ಗೃಹಿಣಿ, ಚಾಮರಾಜನಗರ.