ಡೆಂಘೀ ವಿರುದ್ಧ ಜಾಗೃತಿ ಜಾಥಾ
ಪಿರಿಯಾಪಟ್ಟಣ: ಪ್ರತಿ ಮನೆ ಹಾಗೂ ಸುತ್ತಲಿನ ಪರಿಸರ ಸ್ವಚ್ಛವಾಗಿದ್ದಲ್ಲಿ ಇಡಿ ಗ್ರಾಮವೆ ಸ್ವಚ್ಛವಾಗಿರುತ್ತದೆ ಎಂದು ವೈದ್ಯಾಧಿಕಾರಿ ಡಾ.ಎಸ್.ಕೆ. ರವಿಕುಮಾರ್ ಹೇಳಿದರು. ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಶಾಲಾ ಮಕ್ಕಳು ಮಲೇರಿಯಾ ಮಾಸಾಚರಣೆ ಹಾಗೂ ಡೆಂಘೀ ಜ್ವರದ ಬಗ್ಗೆ ಸ್ವಚ್ಛತೆ ಆಂದೋಲನ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಿದಷ್ಟೂ ರೋಗರುಜಿನಗಳು ಬರುವುದು ತಪ್ಪುತ್ತದೆ ಎಂದು ತಿಳಿಸಿದರು. ಎಸ್ಡಿಎಂಸಿ ಅಧ್ಯಕ್ಷ ಐ.ಎಸ್. ಸುಬ್ರಹ್ಮಣ್ಯ ಮಾತನಾಡಿ, ಸ್ವಚ್ಛ ಕುಟುಂಬ ಆರೋಗ್ಯವಂತ ಕುಟುಂಬ ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಾಲಾ ಮಕ್ಕಳು ಸ್ವಚ್ಛತೆ ಬಗ್ಗೆ ಘೋಷಣೆ ಕೂಗಿ ಜಾಥಾ ನಡೆಸಿದರು. ಶಾಲೆಯ ಮುಖ್ಯಶಿಕ್ಷಕ ಶಿವರಾಜ್, ಆರೋಗ್ಯ ಸಹಾಯಕ ಜಿ.ವಿ. ಶ್ರೀನಾಥ್ ಇದ್ದರು.