ದೊಡ್ಡಕಮರವಳ್ಳಿ ಗ್ರಾಪಂ ಎದುರು ಪ್ರತಿಭಟನೆ
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಜೂ. 24
ಗ್ರಾಮಸ್ಥರ ಬವಣೆಯನ್ನು ಪರಿಹರಿಸುವಲ್ಲಿ ಗ್ರಾಪಂ ವಿಫಲವಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಗ್ರಾಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ದೊಡ್ಡಕಮರವಳ್ಳಿ ಗ್ರಾಮದಲ್ಲಿ ಜರುಗಿತು.
ತಾಲೂಕಿನ ದೊಡ್ಡಕಮರವಳ್ಳಿ ಗ್ರಾಪಂ ವ್ಯಾಪ್ತಿಯ ದಿಂಡಗಾಡು, ಶಾನುಭೋಗನಹಳ್ಳಿ, ಚಾಮರಾಯನಕೋಟೆ ಮೊದಲಾದ ಗ್ರಾಮಗಳ ಗ್ರಾಮಸ್ಥರು ಒಗ್ಗೂಡಿ ಪ್ರತಿಭಟಿಸಿದರು. ಬಡತನ ರೇಖೆಗಿಂತ ಕೆಳಗಿರುವ ನಿವಾಸಿಗಳಿಗೆ ಪಡಿತರ ಚೀಟಿ ವಿತರಿಸಲು ಪಂಚಾಯ್ತಿ ಕಚೇರಿಯಲ್ಲಿ ಫೋಟೋ ತೆಗೆಯುವ ಕಾರ್ಯಕ್ರಮ ಸೋಮವಾರ ನಿಗದಿಗೊಂಡಿದ್ದು, ಇದಕ್ಕೆ ಸುತ್ತಲಿನ ಮೂರು ಗ್ರಾಮಗಳ ಗ್ರಾಮಸ್ಥರು ಬಂದಿದ್ದರು. ಆದರೆ ಪಂಚಾಯ್ತಿಯಲ್ಲಿ ಭಾವಚಿತ್ರ ತೆಗೆಯುವವರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು, ಬಿಲ್ ಕಲೆಕ್ಟರ್ ಸೇರಿದಂತೆ ಯಾರೂ ಇಲ್ಲದ್ದನ್ನು ಕಂಡ ಗ್ರಾಮಸ್ಥರು ರೊಚ್ಚಿಗೆದ್ದರು.
ಗ್ರಾಪಂಗೆ ಒಟ್ಟು 9 ಗ್ರಾಮಗಳು ಸೇರಿದ್ದು, 20 ಸದಸ್ಯರ ಬಲದ ಪಂಚಾಯಿತಿ ಇದಾಗಿದ್ದು, ಪಂಚಾಯಿತಿ ಯಾವುದೇ ಸದಸ್ಯರು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ವಿಚಾರಿಸದೆ ಇರುವುದನ್ನು ಕಂಡ ಗ್ರಾಮಸ್ಥರು, ಪಂಚಾಯಿತಿ ದುರಾಡಳಿತ ಖಂಡಿಸಿ ಪಂಚಾಯಿತಿ ಪ್ರವೇಶದ್ವಾರಕ್ಕೆ ಬೀಗ ಹಾಕಿದ ಅಧ್ಯಕ್ಷರು, ಸದಸ್ಯರು ಹಾಗೂ ಪಿಡಿಒ ವಿರುದ್ಧ ಘೋಷಣೆ ಕೂಗಿದರು.
ಚಾಮರಾಯನಕೋಟೆ ನಿವಾಸಿ ಲಕ್ಷ್ಮಣ, ಗ್ರಾಪಂ ಮಾಜಿ ಸದಸ್ಯೆ ಸರೋಜಮ್ಮ ಮಾತನಾಡಿ, ತಾಪಂ ಇಒ ಪಂಚಾಯಿತಿಗೆ ಧಾವಿಸಿ ಇಲ್ಲಿನ ಅವ್ಯವಸ್ಥೆಗಳನ್ನು ಪರಿಹರಿಸುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಸ್ಥಳಕ್ಕೆ ಯಾರೂ ಬಾರದ ಕಾರಣ ಬೇಸತ್ತ ಗ್ರಾಮಸ್ಥರು ಪಿಡಿಒ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.