ಮಠಗಳು ಒಂದು ಕೋಮಿಗೆ ಸೀಮಿತವಾಗದಿರಲಿ
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಜೂ. 24
ಮಠಗಳಿರುವ ಸುತ್ತಮುತ್ತಲಿನ ಪ್ರದೇಶದ ಜನರು ಶಾಂತಿ ಮತ್ತು ನೆಮ್ಮದಿಯಿಂದ ನೆಲಸಲು ಸಾಧ್ಯವಾಗಿದೆ ಎಂದು ಮುಖಂಡ ಎಚ್.ಪಿ. ನಾಗೇಂದ್ರಪ್ರಸಾದ್ ಅಭಿಪ್ರಾಯಟ್ಟರು.
ತಾಲೂಕಿನ ಬೆಟ್ಟದಪುರ ಗ್ರಾಮದ ಸ್ವತಂತ್ರ ಸಲೀಲಾಖ್ಯ ವಿರಕ್ತಮಠದಲ್ಲಿ ಸೋಮವಾರ ಗಣಾರಾಧನಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಶಿವಾನುಭವ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಮಠಗಳ ಸ್ವಾಮೀಜಿಗಳು ಜನಸಾಮಾನ್ಯರ ಕಷ್ಟಸುಖಗಳಿಗೆ ಸ್ಪಂದಿಸುವುದರೊಂದಿಗೆ ಸಮಾಜ ಸುಧಾರಕರಾಗಿ ಕೆಲಸ ನಿರ್ವಹಿಸುವುದರೊಂದಿಗೆ ಶಿಕ್ಷಣ ಕ್ಷೇತ್ರಕ್ಕೆ ತಮ್ಮದೆ ಆದ ಕೊಡುಗೆ ನೀಡುತ್ತ ಬಂದಿವೆ ಎಂದರು.
ಬೆಟ್ಟದಪುರ ಸಲೀಲಾಖ್ಯ ಮಠದ ಶ್ರೀ ಚೆನ್ನಬಸವದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಯಾವುದೇ ಮಠಮಾನ್ಯಗಳು ಒಂದು ಕೋಮಿಗೆ ಸೀಮಿತವಾಗದೆ ಸಮಾಜದ ಚಿಂತನೆಗೆ ತೊಡಗಿಕೊಳ್ಳಬೇಕು. ಬೆಟ್ಟದಪುರ ಮಠವು ಈ ನಿಟ್ಟಿನಲ್ಲಿ ನಡೆದುಕೊಳ್ಳುತ್ತಿದೆ. ಶ್ರೀಮಠಕ್ಕೆ ಸೇರಿದ ವಿರಾಜಪೇಟೆ ತಾಲೂಕಿನ ಅಮ್ಮತ್ತಿಯಲ್ಲಿರುವ ಕನ್ನಡ ಮಠದ ಉಳಿವಿಗಾಗಿ ತಾವು ಕಳೆದ 30 ವರ್ಷಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಸುಪ್ರೀಂಕೋರ್ಟ್ನಲ್ಲಿ ಜಯ ದೊರಕಿದೆ.
ಕನ್ನಡ ಮಠವನ್ನು ಉಳಿಸಬೇಕೆಂಬ ಪ್ರಯತ್ನ ಹಾಗೂ ಏಕೈಕ ಗುರಿ ಇಟ್ಟುಕೊಂಡ ಹೋರಾಟಕ್ಕೆ ಸಿಕ್ಕ ಫಲವಾಗಿದೆ ಎಂದರು.
ತುಮಕೂರು ಮೇದಿನಿ ಮಠದ ಶ್ರೀ ವಿದ್ವಾನ್ ಶಿವಲಿಂಗಸ್ವಾಮೀಜಿ, ಕಬ್ಬಳ್ಳಿ ಜಂಗಮ ಮಠದ ಶ್ರೀ ಚನ್ನಬಸವಸ್ವಾಮಿಜಿ ಆಶೀರ್ವಚನ ನೀಡಿದರು. ಗುಂಡ್ಲುಪೇಟೆ ಪಡಗೊರು ಅಡವಿಮಠದ ಶಿವಲಿಂಗೇಂದ್ರಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ವಾನ್ ಡಾ.ಶರತ್ ಚಂದ್ರಸ್ವಾಮೀಜಿ, ವಾಗೀಶ ಪಂಡಿತಾರಾಧ್ಯ ಸ್ವಾಮೀಜಿ, ಸಿದ್ದಲಿಂಗೇಶ್ವರ ತಪೋ ಕ್ಷೇತ್ರದ ನವೀಕರಣ ದಾನಿಗಳಾದ ಶರಣ ಎಚ್.ಸಿ. ಮಹದೇವಯ್ಯ, ಹಿರಿಯ ಸಾಧಕರಾದ ಆರ್.ಸಿ. ಸದಾಶಿಪ್ಪ, ಎಚ್.ಎಸ್. ಶಿವನಾಗಪ್ಪ, ಕೆ.ಎನ್. ಪುಟ್ಟಬುದ್ಧಿ, ಪುರುಷೊತ್ತಮಯ್ಯ, ಕಿರಿಯ ಸಾಧಕರಾದ ಪಿ.ವಿ. ನಂಜುಂಡಸ್ವಾಮಿ, ಎಚ್.ಎಸ್. ಸಕಲಾರಾಧ್ಯ, ಕುಮಾರಸ್ವಾಮಿ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿತು.
ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಬೆಟ್ಟದಪುರದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಚಿಕ್ಕಿವೀರದೇಶಿಕೇಂದ್ರ ಸ್ವಾಮೀಜಿ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿರಿಸಿ ನಂದಿಧ್ವಜ ಹಾಗೂ ವೀರಗಾಸೆ ಕುಣಿತದೊಂದಿಗೆ ಮೆರವಣಿಗೆ ನಡೆಯಿತು.
ಬೆಂಗಳೂರು ವಿಭೂತಿಪುರ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಅಣ್ಣಿಗೆರೆ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ, ಸಿಡಿಲು ಮಲ್ಲಿಕಾರ್ಜುನ ಸ್ವಾಮೀಜಿ, ಮಾಜಿ ಶಾಸಕ ಎಚ್.ಸಿ. ಬಸವರಾಜು, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಸಿ.ಸಿ. ಸದಾಶಿವಪ್ಪ, ಎಸ್ಎಸ್ಎಂ ಸಂವರ್ಧನಾ ಟ್ರಸ್ಟ್ನ ಕೆ.ಎನ್. ಸೋಮಶೇಖರ್, ಎಪಿಎಂಸಿ ಅಧ್ಯಕ್ಷ ಕೆ.ಎಂ. ಹೊಲದಪ್ಪ, ಪಿ.ವಿ. ಬಸವರಾಜಪ್ಪ ಇದ್ದರು.