'ರಾಜಕಾರಣಿಗಳಿಗೂ ಸಾಹಿತ್ಯ ಜ್ಞಾನ ಮುಖ್ಯ'
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಜೂ. 24
ದೇಶದ ಮಹಾನ್ ನಾಯಕರಾಗಿ ಹೊರಹೊಮ್ಮಿದ ಹಲವು ಗಣ್ಯರು ಸಾಹಿತ್ಯದ ಜ್ಞಾನ ಸಂಪಾದಿಸಿಕೊಂಡು ರಾಜಕೀಯಯಲ್ಲಿ ತಮ್ಮದೆ ಆದ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಹೇಳಿದರು.
ಇಲ್ಲಿನ ಶಿಕ್ಷಕರ ಸಭಾಂಗಣದಲ್ಲಿ ಮನೆ ಮನೆ ಕವಿಗೋಷ್ಠಿ ಬಳಗದ ವತಿಯಿಂದ ಭಾನುವಾರ ಏರ್ಪಡಿಸಿದ್ದ 161ನೇ ಮನೆ ಮನೆ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್, ಜವಾಹರಲಾಲ್ ನೆಹರು ಸೇರಿದಂತೆ ಹಲವಾರು ಮಂದಿ ಮಹನೀಯರು ಸಾಹಿತ್ಯ ಓದುವ ಮೂಲಕ ಜ್ಞಾನ ಸಂಪಾದಿಸಿಕೊಂಡು, ರಾಜಕೀಯ ಮತ್ತಿತರ ಕ್ಷೇತ್ರಗಳ ಮೂಲಕ ಉತ್ತಮ ಕೊಡುಗೆ ನೀಡಿದ್ದಾರೆ. ರಾಜಕೀಯ ಹಾಗೂ ಸಾಹಿತ್ಯಕ್ಕೆ ಅವಿನಾಭಾವ ಸಂಬಂಧವಿದೆ. ಯಾವ ರಾಜಕಾರಣಿಗಳಿಗೆ ಸಾಹಿತ್ಯದ ಬಗ್ಗೆ ಅರಿವಿಲ್ಲವೋ ಅವರಿಗೆ ಉತ್ತಮ ರಾಜಕಾರಣ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಕನ್ನಡಪರ ಸಂಘಟಕ ಕೊ.ಸು. ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದೈನಂದಿನ ಬದುಕಿನಲ್ಲಿ ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಮರೆಯಾಗುತ್ತಿದೆ. ಕನ್ನಡತನ ಮರೆಯುವ ಪರಿಸ್ಥಿತಿ ಬಂದೊದಗಿದೆ. ಪ್ರತಿಯೊಬ್ಬರೂ ಕನ್ನಡದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಕನ್ನಡ ಉಳಿಸಿ ಬೆಳೆಸಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು.
ಮೈಸೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಪಿ. ಚಂದ್ರಶೇಖರ್, ಡಾ. ವಿಜಯಲಕ್ಷ್ಮಿ ಮಾನಾಪುರ, ಕಸಾಪ ತಾ. ಅಧ್ಯಕ್ಷ ಗೊರಳ್ಳಿ ಜಗದೀಶ್, ಮನೆ ಮನೆ ಕವಿಗೋಷ್ಠಿ ಬಳಗದ ಅಧ್ಯಕ್ಷ ಕಂಪಲಾಪುರ ಮೋಹನ್, ಸಿ.ಈ. ತ್ರಿವೇಣಿ, ಸಯ್ಯದ್ ಫಯಾಜ್ ಇದ್ದರು.