'ಕಲೆ, ಸಾಹಿತ್ಯ ಮೈಗೂಡಿಸಿಕೊಳ್ಳಿ'
ಕ.ಪ್ರ.ವಾರ್ತೆ , ಹುಣಸೂರು , ಜೂ.29
ವಿದ್ಯಾರ್ಥಿಗಳು ತಮ್ಮ ಓದುವಿನ ಜೊತೆಗೆ ಗ್ರಾಮೀಣ ಪ್ರದೇಶದ ಜನಪದ ಕಲೆ, ಸಾಹಿತ್ಯಗಳನ್ನು ಮೈಗೂಡಿಸಿಕೊಂಡು ನಾಡಿನ ಸಂಸ್ಕೃತಿ ಉಳಿಸಿ ಬೆಳೆಸುವಂತೆ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ. ಲಲಿತಾ ದೇವೇಗೌಡ ಕರೆ ನೀಡಿದರು.
ತಾಲೂಕಿನ ಹನಗೋಡು ಹೋಬಳಿಗೆ ಸೇರಿದ ನೇರಳಕುಪ್ಪೆ ಪ್ರೌಢಶಾಲೆಗೆ ಜಿಪಂ ಅನುದಾನದಲ್ಲಿ 2.50 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಬಯಲು ರಂಗಮಂದಿರ ಉದ್ಘಾಟಿಸಿ ಮಾತನಾಡಿ, ಬಹುತೇಕ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಶಿಕ್ಷಕರು ಸಮಸ್ಯೆಗಳನ್ನು ಅರಿತು ನಿವಾರಣೆ ಮಾಡಬೇಕು ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟ ಶಿಕ್ಷಣವನ್ನು ಕೊಡಿಸುವ ಮೂಲಕ ನಾಡಿನ ಸಂಸ್ಕೃತಿಗಳನ್ನು ಉಳಿಸುವ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರು ಮಾರ್ಗದರ್ಶನ ನೀಡಬೇಕೆಂದು ಮನವಿ ಮಾಡಿದರು.
ತಾಪಂ ಸದಸ್ಯರಾದ ಕೆ. ಗಣಪತಿ, ಎಚ್.ಆರ್. ರಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಕಿರಂಗೂರು ಬಸವರಾಜು, ಶಾಲೆಯ ಮುಖ್ಯ ಶಿಕ್ಷಕ ಚಂದ್ರಪ್ಪ ಮಾತನಾಡಿದರು. ನೇರಳಕುಪ್ಪೆ ಗ್ರಾಪಂ ಮಾಜಿ ಅಧ್ಯಕ್ಷ ಸುಮತಿ, ಎಸ್‌ಡಿಎಂಸಿ ಅಧ್ಯಕ್ಷ ಆನಂದ್, ಮುಖಂಡರಾದ ವಿ.ಸಿ. ಸಂಜೀವ್, ಎ.ವಿ. ಬಾಲಕೃಷ್ಣ, ಪುಟ್ಟರಾಜೇಗೌಡ, ಶಿಕ್ಷಕರು ಇದ್ದರು.