ಕಾವಲು ಪಡೆ ಪ್ರತಿಭಟನೆ
ಗುಂಡ್ಲುಪೇಟೆ: ಪೆಟ್ರೋಲ್ ಬೆಲೆ ಧಿಡೀರ್ ಏರಿಕೆ ಮಾಡಿರುವುದನ್ನು ಖಂಡಿಸಿ ಇಲ್ಲಿನ ಕಾವಲು ಪಡೆಯ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಕಾವಲು ಪಡೆ ಅಧ್ಯಕ್ಷ ಎಸ್.ಗುರು ನೇತೃತ್ವದಲ್ಲಿ ಮೆರವಣಿಗೆ ನಡೆಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ತಾಲೂಕು ಕಚೇರಿಗೆ ಆಗಮಿಸಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಎಂಎಲ್ಸಿ ಮಾಡುವಂತೆ ಮನವಿ
ಮೈಸೂರು: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಧರ್ಮಸೇನ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡುವಂತೆ ಜಿಲ್ಲಾ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಬೆಂಗಳೂರಿನ ಸಿಎಂ ನಿವಾಸದಲ್ಲಿ ಭೇಟಿ ಮಾಡಿದ ಪದಾಧಿಕಾರಿಗಳು, ಧರ್ಮಸೇನ ಅವರು ಮಾಜಿ ಸಚಿವ ದಿ. ಎನ್. ರಾಚಯ್ಯ ಅವರ ಪುತ್ರ. ಡಿಸಿಸಿಯಲ್ಲಿ ವಿವಿಧ ಹುದ್ದೆ ಅಲಂಕರಿಸಿ ಪಕ್ಷದ ಗೆಲವಿಗೆ ಶ್ರಮಿಸಿದ್ದಾರೆ. ಮೂರು ಬಾರಿ ಜಿಲ್ಲಾಧ್ಯಕ್ಷರಾಗಿ ಉತ್ತಮ ಸಂಘಟನೆ ಮಾಡಿ ಪಕ್ಷವನ್ನು ಬೆಳೆಸಿದ್ದಾರೆ. ಇವರು ಯಾವುದೇ ಚುನಾವಣೆಗಳಲ್ಲೂ ಸ್ಪರ್ಧಿಸಲು ಅವಕಾಶ ದೊರಯದೆ ನಿಸ್ವಾರ್ಥ ಸೇವೆ ಮಾಡಿದ್ದಾರೆ. ಇದೆಲ್ಲವನ್ನು ಪರಿಗಣಿಸಿ ಈ ಬಾರಿ ಎಂಎಲ್ಸಿ ಮಾಡುವಂತೆ ಪದಾಧಿಕಾರಿಗಳಾದ ಸುಂದರದಾಸ್, ಆರ್. ಪ್ರಕಾಶಕುಮಾರ್, ಅಬ್ದುಲ್ ಖಾದರ್, ಸೀತಾರಾಂ, ಮಹದೇವ ಗಾಣಿಗ, ಬಿ.ವಿ. ಬಸವರಾಜು, ಮಹದೇವಸ್ವಾಮಿ, ಕೋರಿದರು.
ಬೈಕ್ ಕಳ್ಳನ ಬಂಧನ
ಹನೂರು: ಬೈಕ್ಗಳನ್ನು ಕಳವು ಮಾಡಿ ಜನರನ್ನು ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಹನೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬನ್ನೂರಿನ ಹತ್ತಳ್ಳಿ ಗ್ರಾಮದ ರಾಜು(24) ಬಂಧಿತ ಆರೋಪಿ. ಈತ ಮನೆ ಕೆಲಸಕ್ಕೆ ಸೇರಿಕೊಂಡು ಕಳ್ಳತನ ಮಾಡುತ್ತಿದ್ದ. ಕೊಳ್ಳೇಗಾಲ ಡಿವೈಎಸ್ಪಿ ಚನ್ನಬಸವಣ್ಣ ಅವರ ಮಾರ್ಗದರ್ಶನದಲ್ಲಿ ಹನೂರು ಸರ್ಕಲ್ ಇನ್ಸ್ಪೆಕ್ಟರ್ ಡಿ.ರಾಜಣ್ಣ ಹಾಗೂ ಸಿಬ್ಬಂದಿ ರಾಜು ಎಂಬಾತನನ್ನು ಮಂಗಲ ಗ್ರಾಮದಲ್ಲಿ ಸೆರೆ ಹಿಡಿದಿದ್ದು, ಆತನಿಂದ 2 ಲಕ್ಷ ಮೌಲ್ಯದ 4 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಹನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಕೊಳ್ಳೇಗಾಲದ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.