ಗ್ರಾಮಸ್ಥರಿಂದಲೇ ರಸ್ತೆ ದುರಸ್ತಿ
ಕ.ಪ್ರ.ವಾರ್ತೆ , ಎಚ್.ಡಿ.ಕೋಟೆ , ಜೂ. 29
ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ, ಇದರಿಂದ ಬೇಸತ್ತ ಗಣೇಶಪುರ ಗ್ರಾಮಸ್ಥರು ಮನೆ- ಮನೆ ವಂತಿಗೆ ಸಂಗ್ರಹಿಸಿ ತಾವೇ ಶನಿವಾರ ಸ್ವತಃ ದುರಸ್ತಿ ಕಾರ್ಯ ಕೈಗೊಂಡರು.
ತಾಲೂಕಿನ ಅಣ್ಣೂರು ಗ್ರಾಪಂ ವ್ಯಾಪ್ತಿಗೆ ಸೇರಿದ ಗಣೇಶಪುರ ಗ್ರಾಮಕ್ಕೆ ಹಾದು ಹೋಗುವ ಮುಖ್ಯರಸ್ತೆ ಸಂಪೂರ್ಣ ಹಾಳಾಗಿದ್ದು, ರಸ್ತೆಯಲ್ಲಿ ಶಾಲಾ ಮಕ್ಕಳು ಸಾರ್ವಜನಿಕರು ಸಂಚರಿಸಲು ತೀವ್ರ ತೊಂದರೆಯಾಗಿತ್ತು. ರಸ್ತೆ ಪಕ್ಕದಲ್ಲಿ ಗಿಡ- ಗಂಟೆಗಳು ಆಳೆತ್ತರಕ್ಕೆ ಬೆಳೆದು ನಿಂತಿತ್ತು.
ಯಡತೊರೆ ಕುಮಾರ್ ಮಾತನಾಡಿ, ಗ್ರಾಮದಲ್ಲಿ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ, ಕುಡಿಯಲು ನೀರಿಲ್ಲ, ಸರಿಯಾದ ಸಂದರ್ಭಕ್ಕೆ ವಿದ್ಯುತ್ ಸರಬರಾಜು ಆಗುತ್ತಿಲ್ಲ ಎಂದು ಆರೋಪಿಸಿದರು. ಅನಾರೋಗ್ಯದಿಂದ ಬಳಲುವವರನ್ನು ಹೊತ್ತು ತರಬೇಕಾಗುತ್ತದೆ. ಚಿಕಿತ್ಸೆಗೆ ತೆರಳಲು ತಡವಾಗಿ ಕೆಲವರು ಮೃತಪಟ್ಟಿದ್ದಾರೆ ಎಂದು ಹೇಳಿದರು.
ಜನಪ್ರತಿನಿಧಿಗಳು ಗ್ರಾಮವನ್ನು ಕಡೆಗಣಿಸಿದ್ದಾರೆ. ಶಾಸಕ ಚಿಕ್ಕಮಾದು ಅವರು ಇತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಗ್ರಾಪಂ ಉಪಾಧ್ಯಕ್ಷ ಜವರನಾಯಕ, ಸುಬ್ರಹ್ಮಣ್ಯ, ಕೆ. ವೆಂಕಟೇಶ್, ಮಂಜು, ಸುಬ್ಬು, ಮುರುಗನ್, ತಂಗವೇಲು, ರಾಜ, ಮಣಿ, ಸೋಮೇಶ್, ಮರಿಚೌಡನಾಯಕ, ದಂಡನಾಯಕ ಇದ್ದರು.