ಬದ್ಧತೆಯಿಂದ ಕೆಲಸ ಮಾಡಿ ಪ್ರೀತಿ, ವಿಶ್ವಾಸ ಗಳಿಸಿ
ಕ.ಪ್ರ.ವಾರ್ತೆ , ಕೆ.ಆರ್.ಪೇಟೆ , ಜೂ.29
ಸರ್ಕಾರಿ ನೌಕರರು ಲಂಚಕ್ಕಾಗಿ ಜನರನ್ನು ಶೋಷಣೆ ಮಾಡಿ ಶಾಪಕ್ಕೆ ಗುರಿಯಾಗದೆ ಬದ್ಧತೆಯಿಂದ ಕೆಲಸ ಮಾಡಿ ಪ್ರೀತಿ ಮತ್ತು ವಿಶ್ವಾಸ ಗಳಿಸಲು ಮುಂದಾಗಬೇಕು ಎಂದು ಲೋಕಾಯುಕ್ತ ಇನ್ಸ್ಪೆಕ್ಟರ್ ಪಿ.ಕೆ.ರಾಜು ಕಿವಿಮಾತು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ನಂತರ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಕೆಲಸ ದೇವರ ಕೆಲಸ. ಆದ್ದರಿಂದ ಸರ್ಕಾರಿ ನೌಕರರು ಬಡಜನರ ಸೇವೆಯಲ್ಲಿ ದೇವರನ್ನು ಕಾಣುವ ಪ್ರಯತ್ನ ಮಾಡಬೇಕು ಎಂದರು.
ಸರ್ಕಾರಿ ನೌಕರರು ತಾವು ಕರ್ತವ್ಯ ನಿರ್ವಹಿಸುತ್ತಿರುವ ಅವಧಿಯಲ್ಲಿ ಅವಶ್ಯಕತೆಗಿಂತ ಹೆಚ್ಚಿನ ಹಣವನ್ನು ತಮ್ಮಲ್ಲಿ ಇಟ್ಟುಕೊಳ್ಳಬಾರದು. ತಾವು ಹೊಂದಿರುವ ಹಣವನ್ನು ರಿಜಿಸ್ಟಾರ್ ಪುಸ್ತಕದಲ್ಲಿ ಪ್ರತಿದಿನ ಕಚೇರಿಯಲ್ಲಿ ಕರ್ತವ್ಯ ಆರಂಭಿಸುವ ಮುನ್ನವೇ ನಮೂದು ಮಾಡಬೇಕು ಎಂದು ಸಲಹೆ ನೀಡಿದರು.
ಪುರಸಭೆ ವ್ಯಾಪ್ತಿಯ ಹೇಮಾವತಿ ಬಡಾವಣೆ ಮತ್ತು ಟಿಬಿ ಬಡಾವಣೆಯಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ರಾಜಕೀಯ ಪುಡಾರಿಗಳು ಅಕ್ರಮವಾಗಿ ಪುರಸಭೆಯ ಜಾಗದಲ್ಲಿ ಮನೆಗಳನ್ನು ನಿರ್ಮಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಗಮನ ವಹಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಪುರಸಭೆಯ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನ ಮತ್ತು ಎಸ್.ಎಫ್.ಸಿ ಅನುದಾನದಲ್ಲಿ ಅನುಷ್ಠಾನಗೊಳಿಸುವ ಅಭಿವೃದ್ಧಿ ಕಾರ್ಯಗಳು ಕಳಪೆಯಾಗಿವೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಹಾಜರಿದ್ದ ತಹಸೀಲ್ದಾರ್ ಬಿ.ಅಹೋಬಲಯ್ಯ ಮಾತನಾಡಿ, ತಾಲೂಕಿನಾದ್ಯಂತ ನಕಲಿ ಮದ್ಯ ಮಾರಾಟವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಅಬಕಾರಿ ಅಧಿಕಾರಿಗಳು ಎಚ್ಚರ ವಹಿಸುವಂತೆ ತಿಳಿಸಿದರು.
ನೀರಾವರಿ ಇಲಾಖೆಯ ಎಂಜಿನಿಯರ್ಗಳಾದ ಅಣ್ಣಯ್ಯ, ಸುರೇಶ್, ಜಿಪಂ ಎಂಜಿನಿಯರಿಂಗ್ ಉಪವಿಭಾಗದ ಎಇಇ ಅನಂತಪದ್ಮನಾಭಾಚಾರ್, ಲೋಕೋಪಯೋಗಿ ಇಲಾಖೆಯ ಎಇಇ ಚಂದ್ರಶೇಖರ್, ಚೆಸ್ಕಾಂ ಎಇಇ ರಾಜಶೇಖರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಚಂದ್ರಮೌಳಿ, ತಾಲೂಕು ಸಾಮಾಜಿಕ ವಲಯ ಅರಣ್ಯಾಧಿಕಾರಿ ಸರಗೂರು ರಾಧಾಕೃಷ್ಣ, ಕ್ಷೇತ್ರಶಿಕ್ಷಣಾಧಿಕಾರಿ ಜಿ.ಬಿ.ರಾಮಪ್ಪ, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಎಚ್.ಟಿ.ಹರೀಶ್ ಉಪಸ್ಥಿತರಿದ್ದರು.