ಮೈಸೂರು ಜೈಲಲ್ಲಿ ಗಾಂಜಾ, ಮೊಬೈಲ್ ಪತ್ತೆ
ಮೈಸೂರು: ಕಾರಾಗೃಹ ಇಲಾಖೆ ಭದ್ರತಾ ವಿಭಾಗದ ಡಿಐಜಿ ಎಸ್. ರವಿ ಅವರು ಮೈಸೂರು ಕೇಂದ್ರ ಕಾರಾಗೃಹಕ್ಕೆ ಶನಿವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಜೈಲಿನೊಳಗೆ ಗಾಂಜಾ ಪೊಟ್ಟಣ, ಮೊಬೈಲ್ ಮತ್ತು ಸಿಮ್ ಸಿಕ್ಕಿದೆ. ಪ್ರತಿಯೊಂದು ಸೆಲ್, ಬ್ಯಾರಕ್‌ಗಳನ್ನು ತಪಾಸಣೆ ಮಾಡಿದರು.
ಭೂಗತ ಪಾತಕಿ ಬಚ್ಚಾಖಾನ್ ಇರುವ ಸೆಲ್‌ಅನ್ನು ಪರಿಶೀಲಿಸಿ, ಆತನ ಚಲನವಲನದ ಮೇಲೆ ನಿಗಾ ಇಡುವಂತೆ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಜಯಸಿಂಹ ಅವರಿಗೆ ಸೂಚಿಸಿದರು.
ಬಚ್ಚಾಖಾನ್ ಇರುವ ಕಡೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಹೊರಗೆ ನಾಲ್ಕು ಸಿಬ್ಬಂದಿ ನಿಯೋಜಿಸಲಾಗಿದೆ. ಊಟ, ತಿಂಡಿಯನ್ನು ಆತನ ಕೊಠಡಿಗೆ ಸರಬರಾಜು ಮಾಡಲಾಗುತ್ತಿದೆ. ಜೈಲಿನಲ್ಲಿರುವ ಇತರರಿಗೆ ಆತನ ಸಂಪರ್ಕ ಸಿಗದಂತೆ ಇರಿಸಲಾಗಿದೆ ಎಂದು ಜಯಸಿಂಹ ವಿವರಿಸಿದರು.
ಮೊಬೈಲ್ ಜಾಮರ್: ಕಾರಾಗೃಹ ಇಲಾಖೆ ಡಿಐಜಿ ಎಸ್. ರವಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜೈಲಿನಲ್ಲಿ ನಿಷೇಧಿತ ವಸ್ತುಗಳ ಬಳಕೆ, ಅಕ್ರಮ ಚಟುವಟಿಕೆ ತಡೆಗಟ್ಟಲು ಬೆಂಗಳೂರು ಪರಪ್ಪನ ಅಗ್ರಹಾರದ ಜೈಲಿನಲ್ಲಿ 3ಜಿ ಮೊಬೈಲ್ ಜಾಮರ್ ಅಳವಡಿಸುವ ಪ್ರಕ್ರಿಯೆ ಆರಂಭಿಸಿದ್ದು, ಇನ್ನು 1 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಇದರ ಸಾಧಕ- ಬಾಧಕ ಅರಿತು ನಂತರ ಇತರೆ ಜೈಲಿಗೂ ವಿಸ್ತರಿಸಲು ಚಿಂತಿಸಲಾಗಿದೆ ಎಂದರು.
ಮೈಸೂರು ಜೈಲಿನಲ್ಲಿ 2ಜಿ ಮೊಬೈಲ್ ಜಾಮರ್ ಅಳವಡಿಸಲಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಮೊಬೈಲ್ ಇದ್ದರೆ ಅಕ್ರಮವಾಗಿ ಬಳಸುವ ಸಾಧ್ಯತೆ ಇದೆ. ಹೀಗಾಗಿ, 3ಜಿ ಮೊಬೈಲ್ ಜಾಮರ್ ಪರಿಣಾಮವನ್ನು ಗಮನಿಸಿ ಬಳ್ಳಾರಿ, ಬೆಳಗಾವಿ, ಗುಲ್ಬರ್ಗ ಜೈಲಲ್ಲಿ ಅಳವಡಿಸುವ ಆಲೋಚನೆಯಿದೆ ಎಂದರು.
ಜೈಲಿನಲ್ಲಿ ಸಿಗುವ ಸಿಮ್‌ಗಳನ್ನು ನಾಶಪಡಿಸಲಾಗುತ್ತಿತ್ತು. ಆದರೆ, ಈಗ ಅದನ್ನು ಸಿಐಡಿ ಪೊಲೀಸರಿಗೆ ನೀಡಿ ಯಾವ್ಯಾವ ರೀತಿ ಬಳಕೆ ಆಗಿದೆ ಎಂಬುದರ ಬಗ್ಗೆ ಮಾಹಿತಿ ಪಡೆದು ಕ್ರಮ ಜರುಗಿಸುವ ಚಿಂತನೆಯಿದೆ. ಕೈದಿಗಳು ಬಳಸಿದ್ದರೆ ಮೊಕದ್ದಮೆ ದಾಖಲಿಸುವುದು. ಇಲಾಖೆ ಸಿಬ್ಬಂದಿ ಬಳಸಿದ್ದರೆ ಇಲಾಖೆ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು.
ಬೆಂಗಳೂರು ಸೇರಿದಂತೆ ಎಲ್ಲಾ ಜೈಲಿನಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವ ಪ್ರಸ್ತಾಪವಿದೆ. ಈಗ ಅಳವಡಿಸಲಾಗಿರುವ ಸಿಸಿ ಟಿವಿ ಕ್ಯಾಮೆರಾಗಳು ಪ್ರವೇಶ ದ್ವಾರ, ಅಡುಗೆ ಕೊಠಡಿ, ಅಧಿಕಾರಿಗಳ ಕೊಠಡಿ ಹಾಗೂ ಪ್ರಮುಖ ಕೈದಿಗಳು ಇರುವ ಕಡೆ ಮಾತ್ರ ಇದೆ. ಮುಂದೆ ಎಲ್ಲಾ ಕಡೆ ಕಣ್ಣಿಡಲು ಹೆಚ್ಚಿನ ಕ್ಯಾಮೆರಾ ಅಳವಡಿಸಲಾಗುವುದು ಎಂದು ತಿಳಿಸಿದರು.