ಸಾಹಿತ್ಯ ಸಂಭ್ರಮ ಕೇವಲ ಯಾಂತ್ರಿಕ
ಕ.ಪ್ರ.ವಾರ್ತೆ , ಮೈಸೂರು , ಜೂ. 29
ಇಂದು ಸಾಹಿತ್ಯ ಸಂಭ್ರಮ ಕೇವಲ ಯಾಂತ್ರಿಕವಾಗುತ್ತಿದೆ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ನೀಲಗಿರಿ ತಳವಾರ್ ವಿಷಾದಿಸಿದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯು ವಿಶ್ವವಿದ್ಯಾನಿಲಯದ ಧನ ಸಹಾಯ ಆಯೋಗದ ವಿಶೇಷ ನೆರವು ಯೋಜನೆಯಡಿ(ಎಸ್ಎಪಿ) ಶನಿವಾರ ಏರ್ಪಡಿಸಿದ್ದ ವಿಮರ್ಶಾ ಕಾರ್ಯಾಗಾರದ ಸಮಾರೋಪದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನವ್ಯ, ನವೋದಯ ಹಾಗೂ ಪ್ರಗತಿಶೀಲ ಸಾಹಿತ್ಯದ ಕಾಲದಲ್ಲಿ ಕಂಡು ಬಂದಿದ್ದ ಸಾಹಿತ್ಯ ಸಂಭ್ರಮ ಇಂದು ಕಾಣದಾಗಿದೆ. ಪ್ರಸ್ತುತ ಹೆಚ್ಚು ಕೃತಿಗಳು ಹೊರ ಬರುತ್ತಿರುವುದು ಹಾಗೂ ಅಷ್ಟೆ ಪ್ರಮಾಣದಲ್ಲಿ ವಿರ್ಮಶೆಗಳು ನಡೆದಿರುವುದು ಸಂತಸದ ಸಂಗತಿ. ಆದರೆ, ಇಂದಿನ ಸಾಹಿತ್ಯ ಸಂಭ್ರಮ ಕೇವಲ ಯಾಂತ್ರಿಕವಾಗುತ್ತಿದೆ ಎಂದು ತಿಳಿಸಿದರು.
ಕವಿಯೊಳಗೆ ಒಬ್ಬ ವಿಮರ್ಶಕ ಇರುವಂತೆ ವಿಮರ್ಶಕನೊಳಗೊಬ್ಬ ಕವಿ ಇರುತ್ತಾನೆ. ಸಾಹಿತ್ಯ ಸೃಜನಕ್ರಿಯೆ ಹಾಗೂ ವಿಮರ್ಶಕ್ರಿಯೆ ಹದವಾಗಿ ನಡೆದಾಗ ಶ್ರೇಷ್ಠ ಕೃತಿಯಾಗಿ ರೂಪುಗೊಂಡು ಅದು ಬಹಳ ಕಾಲ ನಿಲ್ಲುತ್ತದೆ. ಕವಿಯಂತೆ ವಿಮರ್ಶಕರ ಜವಾಬ್ದಾರಿಯೂ ಮುಖ್ಯ. ಆದರೆ, ಕೆಲವು ವಿಮರ್ಶಕರು ಕೃತಿಯ ಮುನ್ನುಡಿ ಮಾತ್ರ ನೋಡಿ ವಿಮರ್ಶೆ ಮಾಡುವವರು ಇದ್ದಾರೆ. ಇದು ಕೃತಿಗೆ ಹಾಗೂ ಲೇಖಕನಿಗೆ ಮಾಡುವ ಅನ್ಯಾಯ ಎಂದರು.
ಸಮಾರೋಪ ಭಾಷಣ ಮಾಡಿದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಕುವೆಂಪು ಕಾವ್ಯಾಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಪ್ರೊ. ಒ.ಎಲ್. ನಾಗಭೂಷಣಸ್ವಾಮಿ, ವಿಮರ್ಶೆ ಕೇವಲ ಫಲಿತಾಂಶವಲ್ಲ. ಅದೊಂದು ಪ್ರಕ್ರಿಯೆ. ಅದ್ದರಿಂದ ಓದುಗರಿಗೂ ತಿಳಿವಳಿಕೆ ಮೂಡಲಿದೆ. ಮುಂದಿನ ತಲೆಮಾರು ಉತ್ತರ ಹುಡುಕುವಂತಹ ಪ್ರಶ್ನೆಯನ್ನು ಅದು ಬಿಟ್ಟುಹೊಗಬೇಕು. ಸಾಹಿತ್ಯ ಚಿನ್ನವಾದರೆ, ವಿಮರ್ಶೆ ತೂಗುವ ತಕ್ಕಡಿ ಎಂದು ಹೇಳಿದರು.
ಸ್ಯಾಪ್ ಯೋಜನೆಯ ಸಂಯೋಜಕ ಪ್ರೊ. ಕೆ.ಎನ್. ಗಂಗಾನಾಯಕ್, ಉಪಸಂಯೋಜಕ ಡಾ. ಎಂ. ನಂಜಯ್ಯ ಹೊಂಗನೂರು ಇದ್ದರು. ಸಂಶೋಧಕ ಹೊಂಬಯ್ಯ ಹೊನ್ನಲಗೆರೆ ನಿರೂಪಿಸಿದರು.
ಇದಕ್ಕೂ ಮುನ್ನ ನಡೆದ ಮೂರನೇ ವಿಚಾರ ಗೋಷ್ಠಿಯಲ್ಲಿ ನವೋದಯ ವಿಮರ್ಶೆಯ ಪರಿಕಲ್ಪಿನೆ ಎಂಬ ವಿಷಯ ಕುರಿತು ಪ್ರೊ. ಗಂಗಾನಾಯಕ್, ಆಧುನಿಕ ಕಾವ್ಯಗಳ ವಿಮರ್ಶಾ ನಿಲುವುಗಳು ಎಂಬ ವಿಷಯ ಕುರಿತು ಡಾ. ಕವಿತಾ ರೈ, ದರ್ಶನ ವಿಮರ್ಶೆ ಎಂಬ ವಿಷಯ ಕುರಿತು ಡಾ. ಎನ್. ಕುಮುದಾ ಹಾಗೂ ಪ್ರಾಚೀನ ಕನ್ನಡ ಕವಿಗಳ ಕಾವ್ಯ ಮೀಮಾಂಸಾ ಧೋರಣೆಗಳು ಎಂಬ ವಿಷಯ ಕುರಿತು ಡಾ. ಮ. ರಾಮಕೃಷ್ಣ ಹಾಗೂ ನಾಲ್ಕನೇ ಗೋಷ್ಠಿಯಲ್ಲಿ ಪ್ರಮುಖ ಲೇಖಕರ ಸಾಧನೆಗಳು ಎಂಬ ವಿಷಯ ಕುರಿತು ಡಾ.ಕೇಶವಶರ್ಮ ಹಾಗೂ ಕನ್ನಡ ವಿಮರ್ಶೆ - ಸಮಸ್ಯೆ ಮತ್ತು ಸವಾಲುಗಳು ಎಂಬ ವಿಷಯ ಕುರಿತು ಡಾ. ಎನ್.ಕೆ. ಲೋಲಾಕ್ಷಿ ಮಾತನಾಡಿದರು.