48 ಗಂಟೆಗಳ ಅವಧಿಯಲ್ಲಿ ಪ್ರಚಾರ ಮಾಡಬೇಡಿ
ಮೈಸೂರು: ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ರಾಜ್ಯ ಚುನಾವಣಾ ಆಯೋಗದ ಆದೇಶದನ್ವಯ ಈ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮತದಾನ ಪ್ರಾರಂಭಕ್ಕೆ ಹಿಂದಿನ 48 ಗಂಟೆಗಳ ಅವಧಿಯಲ್ಲಿ ಯಾವುದೇ ರಾಜಕೀಯ ಪಕ್ಷವಾಗಲೀ ಅಥವಾ ಅಭ್ಯರ್ಥಿಗಳಾಗಲೀ ಅಥವಾ ಅವರ ಪರವಾಗಿ ಅವರ ಬೆಂಬಲಿಗರಾಗಲಿ ಪ್ರಚಾರ ಕಾರ್ಯ ಮಾಡತಕ್ಕದ್ದಲ್ಲವೆಂದು ಡಿಸಿ ಡಾ. ರಾಮೇಗೌಡ ತಿಳಿಸಿದ್ದಾರೆ.
ಇದಲ್ಲದೆ ಮತದಾರರಲ್ಲದವರು ಸದರಿ ವಾರ್ಡಿನ ವ್ಯಾಪ್ತಿಯಲ್ಲಿ ಇರುವಂತಿಲ್ಲವೆಂದು ಆದೇಶಿಸಿ ಈ ಕಲ್ಯಾಣ ಮಂಟಪ, ವಸತಿ ಗೃಹಗಳನ್ನು ಪರಿಶೀಲನೆ ಮಾಡುವಂತೆ ಹಾಗೂ ಇತರೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಪೊಲೀಸ್ ಆಯುಕ್ತರು, ಪೊಲೀಸ್ ಅಧೀಕ್ಷಕರು, ಮತದಾರರಲ್ಲದವರು ಸದರಿ ವಾರ್ಡಿನಲ್ಲಿ ಇಲ್ಲದಿರುವ ಬಗ್ಗೆ ಕಲ್ಯಾಣ ಮಂಟಪ ಹಾಗೂ ಇತರೆ ಸ್ಥಳಗಳನ್ನು ಪರಿಶೀಲಿಸಿ ಕ್ರಮ ವಹಿಸುವಂತೆ, ಎಸಿ, ಉಪವಿಭಾಗಾಧಿಕಾರಿ, ತಹಸೀಲ್ದಾರರು ತಮ್ಮ ವ್ಯಾಪ್ತಿಯ ಚುನಾವಣಾಧಿಕಾರಿಗಳಿಗೆ ಪ್ರಚಾರದ ಹಾಗೂ ನೀತಿ ಸಂಹಿತೆ ಬಗ್ಗೆ ಎಲ್ಲ ಅಭ್ಯರ್ಥಿಗಳಿಗೆ ತಿಳಿಸುವಂತೆ ನಿರ್ದೇಶನ ನೀಡಿದ್ದಾರೆ.
ಮತದಾನ ಪ್ರಾರಂಭಕ್ಕೆ ಹಿಂದಿನ 48 ಗಂಟೆಗಳ ಅವಧಿಯಲ್ಲಿ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ಸಾರ್ವಜನಿಕ ಸಭೆ ಮತ್ತು ಮುಂತಾದವುಗಳನ್ನು ಏರ್ಪಡಿಸತಕ್ಕದಲ್ಲ. ಮತದಾರರಿಗೆ ಮೊಬೈಲ್ ಮೂಲಕ ಎಸ್ಎಂಎಸ್ ಕಳುಹಿಸಬಾರದು. ಎಫ್ಎಂ, ರೇಡಿಯೋ, ಟಿವಿ ಚಾನಲ್ ಮಾಧ್ಯಮಗಳ ಮೂಲಕ ಪ್ರಚಾರ ಮಾಡತಕ್ಕದ್ದಲ್ಲ. ಮತದಾರರಿಗೆ ವಿಡಿಯೋ ಕ್ಲಿಪಿಂಗ್ಸ್ ಪ್ರದರ್ಶಿಸತಕ್ಕದಲ್ಲ ಹಾಗೂ ದಿನಪತ್ರಿಕೆಗಳಲ್ಲಿ ಜಾಹೀರಾತು ಹೊರಡಿಸಬಾರದು. ಈ ಬಗ್ಗೆಯ ದೂರುಗಳನ್ನು ಜಿಲ್ಲಾ ಮಟ್ಟದಲ್ಲಿ ರಚಿಸಿರುವ ಮಾಧ್ಯಮ ಸಮಿತಿಯಿಂದ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.