ಡಿಸಿ ನಿವಾಸ ತೆರವು ಮಾಡಿದ ವಸ್ತ್ರದ್
ಮೈಸೂರು: ಮೈಸೂರು ಜಿಲ್ಲಾಧಿಕಾರಿಯ ಅಧಿಕೃತ ನಿವಾಸ ಜಲಸನ್ನಿಧಿಯಲ್ಲಿ ಕಳೆದ ಮೂರು ತಿಂಗಳಿಂದ ವಾಸಿಸುತ್ತಿದ್ದ ಪುರಾತತ್ವ ಇಲಾಖೆಯ ಆಯುಕ್ತ ಪಂಚಾಕ್ಷರಿ ಶರಣಯ್ಯ ವಸ್ತ್ರದ್ ಕೊನೆಗೂ ತೆರವು ಮಾಡಿದ್ದಾರೆ.
ಚಾಮುಂಡಿಬೆಟ್ಟ ತಪ್ಪಲಿನ ಭೂವಿವಾದದ ಹಿನ್ನೆಲೆಯಲ್ಲಿ ಅವರನ್ನು ಮೂರು ತಿಂಗಳ ಹಿಂದೆಯೇ ಜಿಲ್ಲಾಧಿಕಾರಿ ಸ್ಥಾನದಿಂದ ಎತ್ತಂಗಡಿ ಮಾಡಲಾಗಿತ್ತು. ಆದರೆ, ಇದೇ ಹುದ್ದೆಗೆ ವಾಪಸ್ ಆಗುವ ಪ್ರಯತ್ನ ನಡೆಸಿದ್ದ ಅವರು ಮಗನ ಪರೀಕ್ಷೆಯ ನೆಪವೊಡ್ಡಿ ಮಾರ್ಚ್ವರೆಗೆ ಅಧಿಕೃತ ನಿವಾಸ ತೆರವು ಮಾಡುವುದಿಲ್ಲ ಎಂದು ಹೇಳುತ್ತಿದ್ದರು. ಹೀಗಾಗಿ ನೂತನ ಜಿಲ್ಲಾಧಿಕಾರಿ ಡಾ.ರಾಮೇಗೌಡ ಅವರು ಕಳೆದೊಂದು ತಿಂಗಳಿನಿಂದ ಖಾಸಗಿ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾ ದಂಡಾಧಿಕಾರಿಯೂ ಆದ ಜಿಲ್ಲಾಧಿಕಾರಿಗೆ ಇದರಿಂದ ತೀವ್ರ ಅನಾನೂಕೂಲವಾಗಿತ್ತು.
ಈ ಸಂಬಂಧ ಫೆ.27 ರಂದು ಕನ್ನಡಪ್ರಭದಲ್ಲಿ 'ಡಿಸಿ ಅಧಿಕೃತ ನಿವಾಸ ತೆರವು ಮಾಡದ ವಸ್ತ್ರದ್!' ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು. ಇದರಿಂದ ಬೆಚ್ಚಿಬಿದ್ದ ವಸ್ತ್ರದ್ ಸದ್ದುಗದ್ದಲವಿಲ್ಲದೆ ಅಧಿಕೃತ ನಿವಾಸ ತೆರವು ಮಾಡಿದ್ದಾರೆ. ಇದೀಗ ನೂತನ ಜಿಲ್ಲಾಧಿಕಾರಿ ಡಾ. ರಾಮೇಗೌಡರಿಗೆ ಅಧಿಕೃತ ನಿವಾಸ ಸಿಕ್ಕಿದ್ದು, ಶುಕ್ರವಾರ ಸುಣ್ಣ- ಬಣ್ಣ ಹಚ್ಚುವ ಕಾರ್ಯ ಭರದಿಂದ ಸಾಗಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.