ಪಾನ್ ಬ್ರೋಕರ್ ಹತ್ಯೆ ಪ್ರಕರಣ: ಆಪಾದಿತನಿಗೆ ಜೀವಾವಧಿ ಸಜೆ
ಮೈಸೂರು: ಪಾನ್ ಬ್ರೋಕರ್ ಒಬ್ಬರನ್ನು ಹತ್ಯೆಗೈದಿದ್ದ ವ್ಯಕ್ತಿಯೊಬ್ಬನಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಚೆನ್ನೈನ ವೇಸರವಾಡಿಯ ರಾಜೇಶ್ ಜೀವಾವಧಿ ಶಿಕ್ಷೆಗೆ ಒಳಾಗದವನು. 2011ರ ಮಾರ್ಚ್ 30 ರಂದು ಹುಲ್ಲಹಳ್ಳಿಯ ಅರ್ಜುನ್ ಪಾನ್ಬ್ರೋಕರ್ನ ಮಾಲೀಕ ಅರ್ಜುನ್ ಎಂಬವರನ್ನು ಅಪಘಾತದಲ್ಲಿ ಮೃತಪಟ್ಟಂತೆ ಬಿಂಬಿಸಿ ಹತ್ಯೆ ಮಾಡಲಾಗಿತ್ತು. ಎಚ್.ಡಿ. ಕೋಟೆ ರಸ್ತೆಯ ಹೊಮ್ಮರಗಳ್ಳಿ ಕಬಿನಿ ನಾಲೆಯ ಸೇತುವೆ ಬಳಿ ಸುತ್ತಿಗೆಯಿಂದ ಆತನ ತಲೆಗೆ ಹೊಡೆದು ಕೊಲೆ ಮಾಡಿ, ಅಪಘಾತದಿಂದ ಮೃತಪಟ್ಟಿದ್ದಾನೆ ಎಂದು ವೈದ್ಯರಿಗೆ ಮತ್ತು ಪೊಲೀಸರಿಗೆ ತಿಳಿಸಿ ಪ್ರಕರಣ ದಿಕ್ಕು ತಪ್ಪಿಸಲು ರಾಜೇಶ್ ಯತ್ನಿಸಿದ್ದ. ರಾಜೇಶ್ನ ಸಹೋದರಿ ಹೇಮಾಳನ್ನು ಅರ್ಜುನ್ ವಿವಾಹವಾಗಿದ್ದ. ಹೇಮಾ ಈ ಹಿಂದೆ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿ ಆತನಿಗೆ ಒಂದು ಮಗು ಸಹ ಇತ್ತು. ಆದರೆ, ಆತನೊಂದಿಗೆ ಜೀವನ ಮಾಡದ ಹೇಮಾ ವಿಚ್ಛೇದನ ಪಡೆದಿದ್ದರು. ಈ ವಿಷಯವನ್ನು ಅರ್ಜುನ್ಗೆ ತಿಳಿಸದೆ ಹೇಮಾಳನ್ನು ವಿವಾಹ ಮಾಡಿಕೊಡಲಾಗಿತ್ತು. ಅರ್ಜುನ್ ಜೊತೆಯೂ ಹೇಮಾ ಸಂಸಾರ ಮಾಡದೆ ಮನಬಂದಂತೆ ವರ್ತಿಸುತ್ತಿದ್ದರು. ಅಲ್ಲದೆ, ಯಾರಿಗೂ ಹೇಳದೆ ಮನೆಯಲ್ಲಿರದೆ ಹೊರ ಹೋಗುತ್ತಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಪಂಚಾಯಿತಿ ಸಹ ಮಾಡಲಾಗಿತ್ತು. ಹೇಮಾಳಿಗೆ ಮತ್ತೊಂದು ವಿವಾಹವಾಗಿದೆ ಎಂಬ ವಿಷಯ ಅರ್ಜುನ್ಗೆ ತಿಳಿದು ರಾಜೇಶ್ ಅವರ ಮನೆಯವರ ವಿರುದ್ಧ ಜಗಳ ಮಾಡಿದ್ದ. ಈ ಸಂದರ್ಭದಲ್ಲಿ ಸಂಧಾನ ಮಾಡುವ ನೆಪದಲ್ಲಿ ಹುಲ್ಲಹಳ್ಳಿಗೆ ಬಂದ ರಾಜೇಶ್, ಅರ್ಜುನ್ ಜೊತೆಗೂಡಿ ಬೈಕ್ನಲ್ಲಿ ಹೋಗುವಾಗ ಕೊಲೆ ಮಾಡಿದ್ದ. ಎಚ್.ಡಿ. ಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪಿಯ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಲಕ್ಷ್ಮಣ ಮಳವಳ್ಳಿ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ದಂಡ ವಿಧಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.